ಬಾಗಲಕೋಟೆ: ವೈದ್ಯರ ನಿರ್ಲಕ್ಷದಿಂದ ಅವಳಿ ಶಿಶುಗಳು ಹೊಟ್ಟೆಯಲ್ಲೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ಬೀಳಗಿ ತಾಲೂಕಿನ ರೊಳ್ಳಿ ಗ್ರಾಮದ ಶೃತಿ ಹರಿಜನಳ (25) ಗರ್ಭದಲ್ಲೇ ಅವಳಿ ಶಿಶುಗಳು ಸಾವನ್ನಪ್ಪಿವೆ. ಹೆರಿಗೆ ನೋವು ಬಂದ ಹಿನ್ನೆಲೆಯಲ್ಲಿ ಶೃತಿ ಅವರನ್ನು ಸಂಬಂಧಿಕರು ಬೀಳಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಎರಡು ಗಂಟೆ ನಂತರ ಸರಳ ಹೆರಿಗೆಯಾಗುತ್ತೆ ಎಂದು ಭರವಸೆ ನೀಡಿದ್ದರು. ಆದರೆ ಎಂಟು ತಾಸುಗಳ ನಂತರ ಹೆರಿಗೆಯಾಗಿದೆ.
ಹೆರಿಗೆ ವೇಳೆ ಒಂದು ಗಂಡು ಒಂದು ಹೆಣ್ಣು ಅವಳಿ ಶಿಶುಗಳು ಜನಿಸಿದ್ದು, ಗರ್ಭದಲ್ಲೇ ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ. ಬಾಣಂತಿ ಶೃತಿ ಸಂಬಂಧಿಕರು ವೈದ್ಯರ ಭರವಸೆ ಮೇಲೆ ನಾವು ಬೇರೆ ಕಡೆ ಕರೆದೊಯ್ಯಲಿಲ್ಲ. ಶಿಶುಗಳ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪ ಮಾಡಿದ್ದಾರೆ.
ಈ ಘಟನೆ ಸೋಮವಾರ ಬೆಳಿಗ್ಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಬಾಣಂತಿ ಶೃತಿಯನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಾಣಂತಿ ಸಂಬಂಧಿಕರು ಆಗ್ರಹಿಸಿದ್ದಾರೆ.