ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ವಿರೋಧ ಪಕ್ಷಗಳು ಮೋದಿ ಸೋಲಿಸಲು ಮೈತ್ರಿ ಮಾತುಕತೆಗೆ ಒಲವು ತೋರಿಸುತ್ತಿದ್ದರೆ ದೆಹಲಿಯ ಕ್ರೈಸ್ತರು ಎನ್‍ಡಿಎ ಸರ್ಕಾರದ ವಿರುದ್ಧ ಪರೋಕ್ಷವಾಗಿ ಪ್ರಚಾರ ಆರಂಭಿಸಿದ್ದಾರೆ.
ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತತೆಗೆ ಸವಾಲು ಹಾಕುವ ಅಸ್ಥಿರ ರಾಜಕೀಯವನ್ನು ದೇಶ ಎದುರಿಸುತ್ತಿದೆ. ದೇಶದ ಉಳಿವಿಗೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದು ದೆಹಲಿಯ ಆರ್ಚ್ ಬಿಷಪ್ ಒಬ್ಬರು ಬರೆದ ಪತ್ರವೊಂದು ಈಗ ವಿವಾದಕ್ಕೆ ಕಾರಣವಾಗಿದೆ.
ಆರ್ಚ್ ಬಿಷಪ್ ಅನಿಲ್ ಕೌಟೋ ಅವರು, ಮೇ 8ರಂದು ಈ ಪತ್ರವನ್ನು ಬರೆದಿದ್ದು ರಾಜಧಾನಿಯ ವಿವಿಧ ಚರ್ಚ್ ಗಳಿಗೆ ಕಳುಹಿಸಲಾಗಿದೆ. ಮೇ 13 ರಿಂದ 2019ರ ಲೋಕಸಭೆ ಚುನಾವಣೆವರೆಗೆ ಪ್ರಾರ್ಥನೆ ಮಾಡಬೇಕು ಹಾಗೂ ಶುಕ್ರವಾರ ಉಪವಾಸ ಆರಂಭಿಸಬೇಕು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ದೇಶವು ಪ್ರಜಾಪ್ರಭುತ್ವ ಹಾಗೂ ಜಾತ್ಯತೀತಗೆ ಸವಾಲು ಹಾಕುವ ಅಸ್ಥಿರ ರಾಜಕೀಯವನ್ನು ಎದುರಿಸುತ್ತಿದೆ. 2019ರಲ್ಲಿ ನಾವು ಹೊಸ ಸರ್ಕಾರ ಹೊಂದಲು ಹಾಗೂ ದೇಶದ ಉಳಿವಿಗೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಬೇಕು. 2019ರ ಲೋಕಸಭೆ ಚುನಾವಣೆವರೆಗೆ ಚರ್ಚ್ ಗಳಲ್ಲಿ ಪ್ರಾರ್ಥನೆ ಕೈಗೊಳ್ಳಬೇಕು ಹಾಗೂ ಶುಕ್ರವಾರ ಉಪವಾಸ ಆರಂಭಿಸಬೇಕು ಎನ್ನುವ ಅಂಶ ಪತ್ರದಲ್ಲಿದೆ.
ದೇಶದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಅನೇಕ ಕಡೆಗಳಲ್ಲಿ ಕ್ರೈಸ್ತರ ಮೇಲಿನ ದಾಳಿಯಾಗಿದೆ. 2017ರಲ್ಲಿಯೇ 736 ದಾಳಿಯಾಗಿವೆ. ಹೀಗಾಗಿ, ಸರ್ಕಾರದ ವಿರುದ್ಧ ಪ್ರಾರ್ಥನಾ ಸಭೆಗೆ ಹಾಗೂ ಉಪವಾಸಕ್ಕೆ ಕರೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. ದೇಶಾದ್ಯಂತ ಈ ಪ್ರಾರ್ಥನೆಯನ್ನು ಕೈಗೊಳ್ಳಬೇಕು ಎನ್ನುವ ಬೇಡಿಕೆ ಎಲ್ಲಡೆ ವ್ಯಕ್ತವಾಗಿದೆ.
ನರೇಂದ್ರ ಮೋದಿ ಅವರು ಧಾರ್ಮಿಕ ಹಾಗೂ ಜನಾಂಗೀಯ ಅಲ್ಪಸಂಖ್ಯಾತರ ಹಿತವನ್ನು ಕಡೆಗಣಿಸಿದ್ದಾರೆ. ಹಿಂದು ರಾಷ್ಟ್ರ ಸ್ಥಾಪಿಸುವ ಉದ್ದೇಶದಿಂದ ಹಿಂದು ಸಂಘಟನೆಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಕ್ರೈಸ್ತ ಮುಖಂಡರು ಆರೋಪಿಸಿದ್ದಾರೆ.
ಈ ಪತ್ರದ ಮೂಲಕ ಜಾತಿ ಹಾಗೂ ಸಮುದಾಯಗಳಿಗೆ ಪ್ರೇರೇಪಣೆ ನೀಡಲಾಗುತ್ತಿದೆ. ಒಂದು ಪಕ್ಷ ಇಲ್ಲವೇ, ಅಭ್ಯರ್ಥಿಗೆ ಮತದಾನ ಮಾಡಲು ಸಲಹೆ ನೀಡಬಹುದು. ಆದರೆ ಬಿಜೆಪಿಗೆ ಮಾತ್ರ ಮತದಾನ ಮಾಡಬೇಡಿ ಎನ್ನುತ್ತಿರುವ ನಡೆ ಸರಿಯಲ್ಲ ಎಂದು ಬಿಜೆಪಿಯ ವಕ್ತಾರೆ ಎನ್.ಸಿ.ಶೈನಾ ಹೇಳಿದ್ದಾರೆ.