ದಾವಣಗೆರೆ: ಮಲೆನಾಡು ಭಾಗಗಳಲ್ಲಿ ಮಳೆರಾಯ ಆರ್ಭಟಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ತುಂಗಭದ್ರೆ ಮೈ ದುಂಬಿ ಹರಿಯುತ್ತಿದ್ದು, ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ಪುಣ್ಯಕ್ಷೇತ್ರದ ಭಕ್ತರಿಗೆ ನದಿಗೆ ಇಳಿಯದಂತೆ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ.
ಮಲೆನಾಡು ಭಾಗಗಳಲ್ಲಿ ಮಳೆರಾಯ ಆರ್ಭಟಿಸುತ್ತಿರುವುದರಿಂದ ತುಂಗಭದ್ರಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿ ನೀರಿನಲ್ಲಿ ದಿನೇ ದಿನೇ ಏರಿಕೆ ಕಂಡುಬರುತ್ತಿದ್ದು, ಉಕ್ಕಡಗಾತ್ರಿ ಕರಿಬಸವೇಶ್ವರ ದೇವಾಲಯದ ಮೆಟ್ಟಿಲುವರೆಗೂ ನದಿ ನೀರು ಬಂದಿದೆ. ಹೀಗಾಗಿ ಉಕ್ಕಡಗಾತ್ರಿ ಪುಣ್ಯಕ್ಷೇತ್ರಕ್ಕೆ ಬರುವ ಭಕ್ತರಿಗೆ ನದಿಗೆ ಇಳಿಯದಂತೆ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ.
ಉಕ್ಕಡಗಾತ್ರಿ ದೇವಸ್ಥಾನಕ್ಕೆ ಬರುವ ಭಕ್ತರು ನದಿ ನೀರಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡೋದು ವಾಡಿಕೆಯಾಗಿದೆ. ಆದರೆ ನದಿ ನೀರಿನ ಪ್ರಮಾಣ ಜಾಸ್ತಿಯಾಗಿರುವುದರಿಂದ ಭಕ್ತರು ಯಾವುದೇ ಕಾರಣಕ್ಕೂ ನದಿಗೆ ಇಳಿಯದಂತೆ ಕ್ಷೇತ್ರದ ಆಡಳಿತ ಮಂಡಳಿ ಎಚ್ಚರಿಕೆ ವಹಿಸಿದೆ. ಅಲ್ಲದೇ ದಡದ ಸುತ್ತಲೂ ಹಗ್ಗವನ್ನು ಕಟ್ಟಿ ತೆಪ್ಪದಲ್ಲಿ ಕಾವಲು ಕಾಯುತ್ತಿದ್ದಾರೆ.