ಕೊಪ್ಪಳ: ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿ ಪಾತ್ರ ಹೊರತುಪಡಿಸಿದರೆ, ಉಳಿದ ಕಡೆ ಮಳೆ ಸಮರ್ಪಕವಾಗಿ ಆಗದೆ ರೈತರು ಪರದಾಡುತ್ತಿದ್ದಾರೆ. ಇನ್ನೊಂದೆಡೆ ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾದ ಅಲ್ಪ ಸ್ವಲ್ಪ ನೀರನ್ನು ಸಹ ಕಾರ್ಖಾನೆಗೆ ಹರಿಸಲಾಗುತ್ತಿದೆ ಎನ್ನಲಾಗುತ್ತಿದೆ.
ಜಲಾಶಯಗಳಿಗೆ ನೀರು ಹರಿದು ಬರುತ್ತಿದ್ದರೂ ರೈತರ ಬೆಳೆಗಳಿಗೆ ನೀರು ಸಿಗುತ್ತಿಲ್ಲ. ಬದಲಿಗೆ ಕಾರ್ಖಾನೆಗಳಿಗೆ ಮಾತ್ರ ಹರಿಸಲಾಗುತ್ತಿದೆ. ಹೀಗಾಗಿ ರೈತರ ಮೊದಲ ಬೆಳೆಗೆ ನೀರು ಸಿಗುವುದು ಅನುಮಾನ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ. ಸಂಗ್ರಹವಾದ ನೀರನ್ನು ಸದ್ದಿಲ್ಲದೆ, ಕಾರ್ಖಾನೆಗಳಿಗೆ ಸೇರುತ್ತಿದೆ. ಈ ಮೂಲಕ ಕೊಪ್ಪಳ, ಬಳ್ಳಾರಿ, ರಾಯಚೂರು ಜನರ ಜೀವನಾಡಿ ತುಂಗಭದ್ರಾ ಜಲಾಶಯ ಈ ಬಾರಿ ರೈತರ ಮೊದಲ ಬೆಳೆಗೆ ಜೀವಜಲ ಉಣಿಸುವುದು ಕಷ್ಟ ಎಂಬಂತಾಗಿದೆ.
ಕಳೆದ ಬಾರಿ ಜಲಾಶಯದಲ್ಲಿ ಸಾಕಷ್ಟು ನೀರು ಇದ್ದರೂ ಸಹ 2ನೇ ಬೆಳೆಗೆ ನೀರು ಬಿಟ್ಟಿರಲಿಲ್ಲ. ಕಾರ್ಖಾನೆಗಳಿಗೆ ನೀರು ಹರಿಸಲಾಗುತ್ತಿದೆ. ಇದೀಗ ವರ್ಷದ ಮೊದಲ ಬೆಳೆಗೆ ನೀರು ಸಿಗುವುದು ಅನುಮಾನ ಎಂಬಂತಾಗಿದೆ. ಹೀಗಾಗಿ ತುಂಗಭದ್ರಾ ಜಲಾಶಯದ ನೀರು ಬಿಡುಗಡೆಗೆ ಹೇಳುವವರಿಲ್ಲ, ಕೇಳುವವರಿಲ್ಲ ಎನ್ನುವಂತಾಗಿದ್ದು, ಮನಸ್ಸಿಗೆ ಬಂದಂತೆ ಕಾರ್ಖಾನೆಗಳಿಗೆ ಅಕ್ರಮವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಸಹ ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದ್ದು ನಮ್ಮ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ರೈತರು ಕಿಡಿಕಾರಿದ್ದಾರೆ.
ಸಂಗ್ರಹವಾದ ನೀರನ್ನು ಕಾರ್ಖಾನೆಗಳಿಗೆ ಬಿಟ್ಟರೆ ರೈತರ ಬೆಳೆಗಳಿಗೆ ನೀರು ಸಿಗುವುದಿಲ್ಲ. ಕಳೆದ ಬಾರಿ ಇದೇ ರೀತಿಯಾಗಿದ್ದು, ಕೊನೆಯ ಬೆಳೆಗಳಿಗೆ ನೀರು ಬಿಟ್ಟಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಜಲಾಶಯದಲ್ಲಿ 40 ರಿಂದ 60 ಟಿಎಂಸಿ ನೀರು ಸಂಗ್ರಹವಾಗುವ ವರೆಗೆ ಬೆಳೆಗೆ ನೀರು ಬಿಡುವುದಿಲ್ಲ ಎಂದು ಜಲಾಶಯದ ಆಡಳಿತ ಮಂಡಳಿ ಪಟ್ಟು ಹಿಡಿದಿದೆ. ಜಲಾಶಯದಲ್ಲಿ 20 ಟಿಎಂಸಿ ನೀರು ಇದ್ದರೂ ಸಹ ಆಕ್ರಮವಾಗಿ ಕಾರ್ಖಾನೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ರೈತರ ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ.