ಕೊಪ್ಪಳ: ರಾಜ್ಯದ ಎರಡನೇ ಅತಿದೊಡ್ಡದಾದ ತುಂಗಭದ್ರಾ ಜಲಾಶಯವು (Tungabhadra Dam) ಅವಧಿಗೂ ಮುಂಚೆಯೇ ಅರ್ಧದಷ್ಟು ಭರ್ತಿಯಾಗಿದ್ದು, ಇದರಿಂದ ರೈತರಲ್ಲಿ ಮಂದಹಾಸ ಮೂಡಿದೆ. ಜು.1ರಂದು ಅಣೆಕಟ್ಟೆಯಿಂದ ಎಲ್ಲಾ ಕಾಲುವೆಗಳಿಗೆ ನೀರು ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಕಳೆದ ವರ್ಷ ಜಲಾಶಯದಲ್ಲಿ 25 ಟಿಎಂಸಿ ಮಾತ್ರ ನೀರು ಇತ್ತು. ಉತ್ತಮವಾಗಿ ಮುಂಗಾರು ಮಳೆಯಾದ ಹಿನ್ನೆಲೆ ಕೆಲವೇ ದಿನಗಳಲ್ಲಿ ಒಳಹರಿವು ಲಕ್ಷಗಟ್ಟಲೇ ಏರಿಕೆಯಾಯಿತು. ಇದರಿಂದ ಅಣೆಕಟ್ಟೆಗೆ ಏಕಾಏಕಿ ನೀರು ಹೆಚ್ಚಾಗಿತ್ತು. ಹಾಗಾಗಿ ಜನಪ್ರತಿನಿಧಿಗಳು ರೈತರ ಬೇಡಿಕೆಯಂತೆ ನೀರಾವರಿ ಸಲಹಾ ಸಮಿತಿ ಸಭೆ ನಡೆಸದೇ ಜು.21ಕ್ಕೆ ನೀರು ಬಿಡಲಾಗಿತ್ತು. ಆದರೆ ಈ ಬಾರಿ ಪಶ್ಚಿಮಘಟ್ಟಗಳಲ್ಲಿ ಭಾರಿ ಮಳೆಯಾಗಿದ್ದು, ತುಂಗಾ ಮತ್ತು ಭದ್ರಾ ಜಲಾಶಯಗಳು ಸಂಪೂರ್ಣವಾಗಿ ಭರ್ತಿಯಾಗಿದೆ. ಎರಡು ಜಲಾಶಯಗಳಿಂದಲೂ ನೀರು ನದಿಗೆ ಹರಿಸಲಾಗಿದೆ. ಇದರಿಂದಾಗಿ ಪ್ರಸ್ತುತ ಜಲಾಶಯದಲ್ಲಿ 50 ಟಿಎಂಸಿ ನೀರು ಸಂಗ್ರಹವಾಗಿದೆ.ಇದನ್ನೂ ಓದಿ: ಕೋಮುಲ್ ಚುನಾವಣೆಯಲ್ಲಿ ಹಣದ ಹೊಳೆ – ಒಂದೊಂದು ಮತಕ್ಕೆ 5 ರಿಂದ 7 ಲಕ್ಷ ಸಂದಾಯ
ಮುಂಗಾರು ಆರಂಭದಲ್ಲಿಯೇ ತುಂಗಭದ್ರಾ ಜಲಾಶಯದಲ್ಲಿ ಅರ್ಧದಷ್ಟು ನೀರು ಸಂಗ್ರಹವಾಗಿದ್ದು, ಕಳೆದ ವರ್ಷಕ್ಕಿಂತಲೂ 20 ದಿನ ಮುಂಚೆಯೇ ನೀರು ಬಿಡುಗಡೆಗೆ ಸರ್ಕಾರ ನಿರ್ಧರಿಸಿದಂತೆ ಭಾಸವಾಗುತ್ತಿದೆ. ಈ ಹಿನ್ನೆಲೆ ಜೂ.27ರಂದು ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಿಗದಿಪಡಿಸಲಾಗಿದೆ. ಈ ಮೂಲಕ ಜು.1ರಿಂದ ತುಂಗಭದ್ರಾ ಅಣೆಕಟ್ಟೆಯ ಎಡದಂಡೆ, ಬಡಲದಂಡೆ, ವಿಜಯನಗರ, ಹೈಲೆವೆಲ್ ಕಾಲುವೆ ಸೇರಿ ಎಲ್ಲ ಕಾಲುವೆಗಳಿಗೆ ನೀರು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದರಿಂದ ರೈತರಿಗೆ ಅನುಕೂಲ ಆಗಲಿದೆ.
ತುಂಗಭದ್ರಾ ಜಲಾಶಯವು 105 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರವು ತುಂಗಭದ್ರಾ ಜಲಾಶಯದ ಸುರಕ್ಷತಾ ದೃಷ್ಟಿಯಿಂದ 80 ಟಿಎಂಸಿ ನೀರು ಸಂಗ್ರಹ ಮಾಡುವಂತೆ ಸಲಹೆ ನೀಡಿತ್ತು. ಈಗಾಗಲೇ ತುಂಗಭದ್ರಾ ಮಂಡಳಿಯು ತಮ್ಮ ಸಭೆಯಲ್ಲಿ ಚರ್ಚಿಸಿ, ಪ್ರಾಧಿಕಾರದ ಸಲಹೆಯಂತೆ 80 ಟಿಎಂಸಿ ನೀರು ಸಂಗ್ರಹ ಮಾಡಲು ಅನುಮೋದನೆ ಪಡೆದಿದೆ ಎನ್ನಲಾಗಿದ್ದು, ಆದೇಶ ಹೊರಡಿಸುವುದು ಮಾತ್ರ ಬಾಕಿ ಇದೆ.
ಮುಂಗಾರು ಬೆಳೆಗೆ 130 ಟಿಎಂಸಿ ನೀರು ಬೇಕಾಗುತ್ತದೆ. ಪ್ರಸ್ತುತ 50 ಟಿಎಂಸಿ ನೀರು ಸಂಗ್ರಹವಾಗಿದೆ. ನವೆಂಬರ್ ತಿಂಗಳಲ್ಲಿ ಸೈಕ್ಲೋನ್ ಬಂದು, ಮಳೆಯಾಗುವ ಸಾಧ್ಯತೆ ಇದೆ. ಕೇವಲ 11 ಸಾವಿರ ಕ್ಯೂಸೆಕ್ ಒಳಹರಿವು ಬಂದರೂ ಕೂಡಾ 80 ಟಿಎಂಸಿಯಷ್ಟು ತಟಸ್ಥತೆ ಕಾಯ್ದುಕೊಂಡು, ಡೆಡ್ ಸ್ಟೋರೇಜ್, ಆವಿ, ಕುಡಿಯಲು, ಜಲಚರ ಸೇರಿ ಎಲ್ಲ ಸೇರಿ 15 ಟಿಎಂಸಿ ಬೇಕಾಗುತ್ತದೆ. ಇದರ ಹೊರತಾಗಿ 65 ಟಿಎಂಸಿ ನೀರು ಸಂಗ್ರಹವಾದರೆ, ಮತ್ತೊಮ್ಮೆ ರೈತರಿಗೆ ನೀರು ಲಭಿಸುವ ಸಾಧ್ಯತೆ ಇದೆ. ಈ ಹಿನ್ನೆಲೆ ಹೈಲೆವೆಲ್ ಕಾಲುವೆಯ ರೈತರು ಹತ್ತಿ, ಮೆಣಸಿನಕಾಯಿ 6 ತಿಂಗಳ ಬೆಳೆ ಬೆಳೆಯುತ್ತಾರೆ. ಇವರು ಉದಾರತೆ ತೋರಿದರೆ, ಉಳಿದ ಎಲ್ಲ ಕಾಲುವೆಗಳ ರೈತರಿಗೆ ಅನುಕೂಲ ಆಗಲಿದೆ.ಇದನ್ನೂ ಓದಿ: ಹಿಮಾಚಲದಲ್ಲಿ ಮೇಘಸ್ಫೋಟ; ರಣಪ್ರವಾಹಕ್ಕೆ ಇಬ್ಬರು ಬಲಿ, 15-20 ಕಾರ್ಮಿಕರು ಕೊಚ್ಚಿ ಹೋಗಿರುವ ಶಂಕೆ