– ಈವರೆಗೂ 21 ಟಿಎಂಸಿ ನೀರು ಹೊರಕ್ಕೆ
ಬೆಂಗಳೂರು: ಕರ್ನಾಟಕ, ಆಂಧ್ರ, ತೆಲಂಗಾಣದ 17 ಲಕ್ಷ ಎಕರೆಗೆ ನೀರುಣಿಸುವ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ (Tungabhadra Dam) ಕಳೆದ ಏಳು ದಶಕಗಳಲ್ಲಿ ಹಿಂದೆಂದೂ ಬಂದೊದಗದ ಅಪಾಯ ಎದುರಾಗಿದೆ. ಟಿಬಿ ಡ್ಯಾಂನ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿ ಈ ಕ್ಷಣಕ್ಕೆ ಭರ್ತಿ 46 ಗಂಟೆ.
19ನೇ ಗೇಟ್ ಮೇಲೆ ಒತ್ತಡ ಬೀಳುತ್ತೆ ಎಂಬ ಕಾರಣಕ್ಕೆ ಎಲ್ಲಾ 32 ಕ್ರಸ್ಟ್ ಗೇಟ್‌ಗಳಿಂದ 99,567 ಕ್ಯೂಸೆಕ್ ನೀರು ಬಿಡಲಾಗ್ತಿದೆ. ಸದ್ಯ ಡ್ಯಾಂ ಒಳಹರಿವು 25,100 ಕ್ಯೂಸೆಕ್ ಇದೆ. ಈವರೆಗೂ 21 ಟಿಎಂಸಿ ನೀರನ್ನು ಜಲಾಶಯದಿಂದ ಹೊರಗೆ ಬಿಡಲಾಗಿದೆ. ಆಂಧ್ರದ ಶ್ರೀಶೈಲಂ, ನಾಗಾರ್ಜುನಸಾಗರ್, ಪ್ರಕಾಶಂ ಬ್ಯಾರೇಜ್‌ಗಳು ಈಗಾಗಲೇ ಭರ್ತಿ ಆಗಿರುವ ಕಾರಣ ಈ ನೀರೆಲ್ಲಾ ವೃಥಾ ಸಮುದ್ರ ಸೇರುತ್ತಿದೆ. ಇದನ್ನೂ ಓದಿ: ತುಂಗಭದ್ರಾ ಡ್ಯಾಂ ವಾರ್ಷಿಕ ನಿರ್ವಹಣಾ ಗುತ್ತಿಗೆಗೆ ಎಷ್ಟು ಕೋಟಿ ಹಣ ಸಂದಾಯವಾಗಿದೆ? – ಜನಾರ್ದನ ರೆಡ್ಡಿ ಪ್ರಶ್ನೆ
ಗೇಟ್ ಕೊಚ್ಚಿಹೋದ ಸ್ಥಳದಲ್ಲಿ ಕೆಲಸ ಆರಂಭಿಸಬೇಕು ಎಂದರೆ ಡ್ಯಾಂ ಕ್ರಸ್ಟ್‌ಗೇಟ್‌ಗಿಂತ ಸ್ವಲ ಕೆಳಗಿನವರೆಗೂ ನೀರನ್ನು ಖಾಲಿ ಮಾಡಬೇಕು. ಅಂದರೆ, ಒಟ್ಟು 61 ಟಿಎಂಸಿ ನೀರು ಖಾಲಿ ಆಗಬೇಕು. ಈಗಾಗಲೇ 21 ಟಿಎಂಸಿ ನೀರು ಖಾಲಿ ಆಗಿದ್ದು, ಉಳಿದ ನೀರು ಖಾಲಿ ಆಗಲು ಕನಿಷ್ಠ ನಾಲ್ಕು ದಿನ ಬೇಕಾಗಬಹುದು ಎಂದು ಹೇಳಲಾಗ್ತಿದೆ. ಸರ್ಕಾರದ ಸೂಚನೆ ಮೇರೆಗೆ ಹೊಸಪೇಟೆಯ ನಾರಾಯಣ ಎಂಜಿನಿಯರಿಂಗ್ ವರ್ಕ್ಸ್, ಹೊಸಹಳ್ಳಿಯ ಹಿಂದೂಸ್ತಾನ್ ಎಂಜಿನಿಯರಿಂಗ್ ವರ್ಕ್ಸ್, ಹಮೀದ್ ಗ್ರೂಪ್ ಮತ್ತು ಜಿಂದಾಲ್‌ನಲ್ಲಿ ಸಮರೋಪಾದಿಯಲ್ಲಿ 4 ಹೊಸ ಗೇಟ್ ನಿರ್ಮಿಸುವ ಕೆಲಸ ನಡೆದಿದೆ.
ಈ ಗೇಟ್‌ಗಳು ರೆಡಿಯಾಗಿ, ಅವುಗಳ ಪೈಕಿ ಒಂದನ್ನು ಆಯ್ಕೆ ಮಾಡಿ ಅದನ್ನು ಡ್ಯಾಂಗೆ ಅಳವಡಿಸಲು ಕನಿಷ್ಠ 7ರಿಂದ 10 ದಿನ ಹಿಡಿಯಬಹುದು ಎನ್ನಲಾಗ್ತಿದೆ. ಇದರ ನಡುವೆಯೇ ರೈತರ ಬೆಳೆ ಉಳಿಸುವ ಭರವಸೆಯನ್ನು ಜಲಸಂಪನ್ಮೂಲ ಮಂತ್ರಿಯೂ ಆಗಿರುವ ಡಿಸಿಎಂ ನೀಡಿದ್ದಾರೆ. ನಾಳೆ ಸಿಎಂ ಸಿದ್ದರಾಮಯ್ಯ ಡ್ಯಾಂಗೆ ಭೇಟಿ ಕೊಡಲಿದ್ದಾರೆ. ಇದನ್ನೂ ಓದಿ: Tungabhadra Dam | 5 ದಿನಗಳಲ್ಲಿ ಗೇಟ್ ರಿಪೇರಿ – ಸರ್ಕಾರಕ್ಕೆ ಅಧಿಕಾರಿಗಳ ಭರವಸೆ