– ಸಿದ್ದಾರ್ಥ ತಾಂತ್ರಿಕ ಕಾಲೇಜು ಜಾಗ ಬಿಡದಿದ್ದಕ್ಕೆ ಕಾಮಗಾರಿ ವಿಳಂಬ
– 8 ತಿಂಗಳಿಂದ ನೆನೆಗುದಿಗೆ ಬಿದ್ದ ರಸ್ತೆ ಕಾಮಗಾರಿ
ತುಮಕೂರು: ನಗರದ ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಒಡೆತನದ ಸಿದ್ದಾರ್ಥ ತಾಂತ್ರಿಕ ಕಾಲೇಜು ಅಡ್ಡಿಯಾಗಿದೆ.
ಕ್ಯಾತಸಂದ್ರದಿಂದ ಗುಬ್ಬಿ ಗೇಟ್‍ವರೆಗ ಚತುಷ್ಪಥ ರಿಂಗರೋಡ್ ನಿರ್ಮಾಣವಾಗುತ್ತಿದೆ. ಈಗಾಗಲೇ ರಸ್ತೆ ಕಾಮಗಾರಿ ಶೇಕಡ 70ರಷ್ಟು ಪೂರ್ಣಗೊಂಡಿದೆ. ಕಳೆದ 8 ತಿಂಗಳಿಂದ ಇನ್ನುಳಿದ ಶೇಕಡ 30ರಷ್ಟು ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಕಾಮಗಾರಿ ವಿಳಂಬವಾಗೋದಕ್ಕೆ ಪ್ರಮುಖ ಕಾರಣ ಸಿದ್ದಾರ್ಥ ತಾಂತ್ರಿಕ ಕಾಲೇಜು ಎನ್ನಲಾಗಿದೆ. ರಸ್ತೆ ಅಗಲೀಕರಣಕ್ಕೆ ಈ ಕಾಲೇಜಿನ ಸುಮಾರು 30 ಮೀಟರ್ ಜಾಗ ಬಿಟ್ಟುಕೊಡಬೇಕು. ಆದರೆ ಕಾಲೇಜು ಆಡಳಿತ ಮಂಡಳಿ ಇಲ್ಲಿತನಕ ಜಾಗ ಬಿಟ್ಟುಕೊಟ್ಟಿಲ್ಲ. ಆದ್ದರಿಂದ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ.
Advertisement
Advertisement
ಮರಳೂರಿನಲ್ಲಿರುವ ಸಿದಾರ್ಥ ಕಾಲೇಜಿನ ಹಿಂಭಾಗದ 30 ಮೀಟರ್ ಜಾಗ ರಸ್ತೆ ಕಾಮಗಾರಿಗೆ ಬಿಟ್ಟುಕೊಡಬೇಕು. ಕಾಲೇಜು ಸುತ್ತ ಬೃಹತ್ ಕಾಂಪೌಂಡ್ ಇದ್ದು ಇದನ್ನು ತೆರವುಗೊಳಿಸಿ ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕಿತ್ತು. ಜಾಗ ಬಿಟ್ಟುಕೊಡುವಂತೆ ಹಲವಾರು ಬಾರಿ ಕಾಲೇಜು ಆಡಳಿತ ಮಂಡಳಿಗೆ ನೋಟಿಸ್ ಕೂಡ ನೀಡಲಾಗಿದೆ. ಆದರೆ ಆಡಳಿತ ಮಂಡಳಿ ಮಾತ್ರ ಜಾಗ ಬಿಟ್ಟುಕೊಡುವ ಒಲವು ತೋರಿಲ್ಲ. ಆದ್ದರಿಂದ ಕಾಮಗಾರಿ ವಿಳಂಬವಾಗಿದೆ.
Advertisement
Advertisement
ಈ ನಡುವೆ ಪಾಲಿಕೆ ಆಯುಕ್ತ ಭೂಬಾಲನ್ ಅವರು ಸ್ವತಃ ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಿ ವಸ್ತುಸ್ಥಿತಿ ವಿವರಿಸಿದ್ದಾರೆ. ಜಾಗ ಬಿಟ್ಟುಕೊಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪರಮೇಶ್ವರ್ ಕೂಡ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದರೂ ಇಲ್ಲಿತನ ತೆರವು ಕಾರ್ಯ ನಡೆದಿಲ್ಲ.
2019 ಡಿಸೆಂಬರ್ ನಲ್ಲಿ ರಿಂಗ್ ರೋಡ್ ಕಾಮಗಾರಿ ಪೂರ್ಣವಾಗಬೇಕಿತ್ತು. ಸಿದ್ದಾರ್ಥ ಮೆಡಿಕಲ್ ಕಾಲೇಜು, ಶೆಟ್ಟಿಹಳ್ಳಿ ಬಳಿಯ ಕೆಲ ತೊಂದರೆಯಿಂದ ಹೊರವರ್ತುಲ ರಸ್ತೆ ಕಾಮಗಾರಿ ವಿಳಂಬವಾಗಿದೆ. ಪರಿಣಾಮ ಸಾರ್ವಜನಿಕರು ಧೂಳು, ಅಪಘಾತದಿಂದ ಕಿರಿಕಿರಿ ಅಭವಿಸುತಿದ್ದಾರೆ. ಬಡ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಆತುರ ತೋರುವ ಅಧಿಕಾರಿಗಳು ಪ್ರಭಾವಿಗಳ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.