ನಡೆದಾಡೋ ದೇವರು ಶಿವೈಕ್ಯರಾಗಿ 1 ವರ್ಷ- ಪುಣ್ಯಸ್ಮರಣೆಗೆ ಸಿದ್ದಗಂಗಾ ಮಠ ಸಜ್ಜು

Public TV
2 Min Read
TMK

– 50 ಕೆ.ಜಿ ಬೆಳ್ಳಿ ಪುತ್ಥಳಿ ಅನಾವರಣ
– ಭಕ್ತರಿಗೆ ಬೂಂದಿ, ಪಾಯಸದ ವ್ಯವಸ್ಥೆ

ತುಮಕೂರು: ತ್ರಿವಿಧ ದಾಸೋಹಿ, ನಡೆದಾಡೋ ದೇವರು, ಶಿವೈಕ್ಯ ಸಿದ್ದಗಂಗಾಶ್ರೀ ಶಿವಕುಮಾರ ಸ್ವಾಮೀಜಿಗಳು ನಮ್ಮನ್ನಗಲಿ ಇಂದಿಗೆ ಒಂದು ವರ್ಷ. ಶ್ರೀಗಳ ಪ್ರಥಮ ಪುಣ್ಯ ಸಂಸ್ಮರಣೋತ್ಸವಕ್ಕಾಗಿ ಸಿದ್ದಗಂಗಾ ಮಠದಲ್ಲಿ ವಿಶೇಷ ಪೂಜೆ, ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸಿಎಂ ಸೇರಿದಂತೆ ಮಾಜಿ ಸಿಎಂಗಳು ಭಾಗಿಯಾಗ್ತಿದ್ದಾರೆ. ಭಕ್ತರಿಗೆ ಬೂಂದಿ-ಪಾಯಸದ ಊಟ ತಯಾರಿಸಲಾಗುತ್ತಿದೆ.

TMK 1

ಸಿದ್ದಗಂಗಾ ಮಠದಲ್ಲಿ ಶಿವೈಕ್ಯ ಶ್ರೀಗಳ ಒಂದು ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಸಕಲ ತಯಾರಿ ನಡೆದಿದೆ. ಸುಮಾರು 1 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸುವ ಸಾಧ್ಯತೆ ಇದ್ದು, ಸರ್ವ ತಯಾರಿ ನಡೆದಿದೆ. ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಸುಮಾರು 30 ಸಾವಿರ ಜನರು ಕೂರಲು ಆಸನದ ವ್ಯವಸ್ಥೆ ಮಾಡಲಾಗಿದೆ. ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಪುಣ್ಯಸ್ಮರಣೆ ನಡೆಯಲಿದ್ದು, ಸುತ್ತೂರು ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮಿಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಿಎಂ ಯಡಿಯೂರಪ್ಪ ಉದ್ಘಾಟಿಸಲಿದ್ದು, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಮಠಾಧೀಶರು, ಸಾಧು -ಸಂತರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೈಗಾರಿಕೋದ್ಯಮಿ ಮಖೇಶ್ ಗರ್ಗ್ ಹಾಗೂ ಉಗ್ರ ನಿಗ್ರಹ ದಳದ ಮುಖ್ಯಸ್ಥ ಮಣೀಂದರ್ ಜಿತ್ ಸಿಂಗ್ ಬಿಟ್ಟ ಅವ್ರಿಗೆ ಸನ್ಮಾನಿಸಲಾಗುತ್ತಿದೆ.

TMK 3

50 ಕೆಜಿ ಬೆಳ್ಳಿ ಪುತ್ಥಳಿ ಪ್ರತಿಷ್ಠಾಪನೆ:
ಪ್ರಾತಃ ಕಾಲದಿಂದಲೇ ಶ್ರೀಗಳ ಸಮಾಧಿ, ಗದ್ದುಗೆಯಲ್ಲಿ ವಿವಿಧ ಪೂಜಾ ಕೈಂಕರ್ಯ ನಡೆಯಲಿದ್ದು, ಬೆಳಗ್ಗೆ 10.30ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ. ಶ್ರೀಗಳ ಗದ್ದುಗೆ ಮೇಲೆ ಭಕ್ತರೊಬ್ಬರು ನೀಡಿದ್ದ 50 ಕೆಜಿ ಬೆಳ್ಳಿಯ ಪುತ್ಥಳಿ ಪ್ರತಿಷ್ಠಾಪನೆ ಕೂಡ ಆಗಲಿದೆ. ಜನವರಿ 21 ಕ್ಕೆ ಶ್ರೀಗಳು ಲಿಂಗೈಕ್ಯರಾಗಿ ಒಂದು ವರ್ಷ ಕಳೆಯಲಿದೆ. ಆದರೆ ಶಾಸ್ತ್ರದ ಪ್ರಕಾರ ಎರಡು ದಿನದ ಮುಂಚಿತವಾಗಿ ಅಂದರೆ ಇಂದು ಪುಣ್ಯ ಸ್ಮರಣೆ ನಡೆಯಲಿದೆ.

ಬೂಂದಿ-ಪಾಯಸದ ವ್ಯವಸ್ಥೆ:
ಪುಣ್ಯಸ್ಮರಣೆಗೆ ಲಕ್ಷಾಂತರ ಭಕ್ತರು ಆಗಮಿಸುವ ಸಾಧ್ಯತೆ ಇದ್ದು, ಭಕ್ತರಿಗಾಗಿ ಪ್ರಸಾದ ವ್ಯವಸ್ಥೆಯನ್ನೂ ಮಾಡಲಾಗಿದೆ. 7 ಕಡೆ ದಾಸೋಹದ ವ್ಯವಸ್ಥೆ ಮಾಡಲಾಗಿದ್ದು, ಬೂಂದಿ, ಪಾಯಸ ಸೇರಿದಂತೆ ವಿವಿಧ ಖಾದ್ಯ ತಯಾರಾಗಿದೆ. ಸ್ವತಃ ಸಿದ್ದಲಿಂಗ ಸ್ವಾಮೀಜಿಗಳೇ ಎಲ್ಲಾ ಉಸ್ತುವಾರಿ ವಹಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

TMK 2

ಇಂದಿನ ಕಾರ್ಯಕ್ರಮದಲ್ಲಿ ಡಾ. ಶ್ರೀಶಿವಕುಮಾರ ಸ್ವಾಮೀಜಿ ಅನ್ನದಾನ ಸೇವಾ ಟ್ರಸ್ಟ್ ನಿಂದ ಕಾರ್ಯಸೂಚಿ ಕೈಪಿಡಿ ಮತ್ತು ವೆಬ್‍ಸೈಟ್ ಬಿಡುಗಡೆ ಆಗಲಿದೆ. ಒಟ್ಟಾರೆ ಶಿವೈಕ್ಯ ಶ್ರೀಗಳ ಪ್ರಥಮ ಪುಣ್ಯಸ್ಮರಣೆಗೆ ಒಂದ್ಕಡೆಯಾಗಿದ್ರೆ, ಮಠಕ್ಕೆ ಭಕ್ತರ ದೇಣಿಗೆ ಅಪಾರ ಪ್ರಮಾಣದಲ್ಲಿ ಹರಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *