ತುಮಕೂರು: ಶಿವೈಕ್ಯರಾದ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ಈಗ ಆಧ್ಯಾತ್ಮ ಕೇಂದ್ರವಾಗಿ ಪರಿವರ್ತನೆಯಾಗುತ್ತಿದೆ. ಶ್ರೀಗಳು ಲಿಂಗೈಕ್ಯರಾದ ಗದ್ದುಗೆಯ ನೆಲಮಾಳಿಗೆ ಈಗ ಧ್ಯಾನ ಮಂದಿರವಾಗಿ ಬದಲಾಗಿದೆ. ದಿನಂಪ್ರತಿ ಸಾವಿರಾರು ಭಕ್ತಾದಿಗಳು ಬಂದು ಧ್ಯಾನಾಸಕ್ತರಾಗಿ ಧ್ಯಾನದಲ್ಲಿ ಶಿವಕುಮಾರ ಶ್ರೀಗಳನ್ನು ಕಂಡು ಪುನೀತರಾಗುತ್ತಿದ್ದಾರೆ.
ಶಿವೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆ ಬಳಿ ಓಂಕಾರ ಮೊಳಗುತ್ತಿದೆ. ಭಕ್ತಾದಿಗಳ ಮನಸ್ಸು, ಭಾವ, ಬುದ್ಧಿ ಎಲ್ಲವರೂ ಪ್ರಫುಲ್ಲವಾಗುತ್ತಿದೆ. ಆ ಮುಖೇನ ಭಕ್ತಾದಿಗಳು ಶಿವಕುಮಾರ ಶ್ರೀಗಳನ್ನು ಕಂಡು ಪಾವನರಾಗುತ್ತಿದ್ದಾರೆ.
Advertisement
Advertisement
ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿಗಳು ಶಿವೈಕ್ಯರಾದ ಸ್ಥಳದಲ್ಲಿ ಈಗ ಧ್ಯಾನ ಮಂದಿರ ನಿರ್ಮಾಣವಾಗಿದೆ. ಅಂದರೆ ಮೇಲ್ಭಾಗದಲ್ಲಿ ಗದ್ದುಗೆ ಇದ್ದರೆ ನೆಲಮಹಡಿಯಲ್ಲಿ ಧ್ಯಾನಮಂದಿರ ನಿರ್ಮಾಣ ಮಾಡಲಾಗಿದೆ. ಪ್ರಶಾಂತ ವಾತಾವರಣ, ಮಂದ ಬೆಳಕು, ಎದುರಿಗೆ ಶಿವಕುಮಾರ ಶ್ರೀಗಳ ಪುತ್ಥಳಿ ಇದೆ. ಇನ್ನೊಂದೆಡೆಯಿಂದ ಓಂಕಾರ ನಾದ ಕೇಳಿ ಬರುತ್ತಿರುತ್ತದೆ. ಇಲ್ಲಿ ಭಕ್ತಾದಿಗಳು ಕುಳಿತು ಧ್ಯಾನ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
Advertisement
Advertisement
20*10 ವಿಸ್ತೀರ್ಣದಲ್ಲಿರುವ ಈ ಧ್ಯಾನ ಮಂದಿರದಲ್ಲಿ ಒಮ್ಮೆ 5-10 ಜನರಿಗೆ ಮಾತ್ರ ಧ್ಯಾನ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಕೇವಲ 5-10 ನಿಮಿಷ ಮಾತ್ರ ಧ್ಯಾನಕ್ಕೆ ಅವಕಾಶ ಇದೆ. ಬಳಿಕ ಮುಂದಿನ ಭಕ್ತಾದಿಗಳಿಗೆ ಅವಕಾಶ ಮಾಡಿಕೊಡಬೇಕು. ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಧ್ಯಾನ ಮಂದಿರ ತೆರೆದಿರುತ್ತದೆ. ಮೊದಲು ಶ್ರೀಗಳ ಗದ್ದುಗೆ ದರ್ಶನ ಮಾಡಿದ ಬಳಿಕ ಧ್ಯಾನಕ್ಕೆ ಅವಕಾಶ. ದಿನಂಪ್ರತಿ ಸಾವಿರಾರು ಭಕ್ತಾದಿಗಳು ಬಂದು ಜೀವನದ ಜಂಟಾಟ ಮರೆತು, ಧ್ಯಾನಾಸಕ್ತರಾಗಿ ಮನಸ್ಸು ಮತ್ತು ಬುದ್ಧಿಯನ್ನು ಸಮೀಕರಿಸಿ ಶಿವಕುಮಾರ ಶ್ರೀಗಳನ್ನು ಕಂಡು ಪಾವನರಾಗುತ್ತಿದ್ದಾರೆ ಎಂದು ಭಕ್ತೆ ದಿವ್ಯ ಭಾರತಿ ಹೇಳುತ್ತಾರೆ.
ಧ್ಯಾನ ಮಂದಿರ ಪ್ರವೇಶಿಸುತಿದ್ದಂತೆಯೇ ಒಂದು ರೀತಿಯ ಆಹ್ಲಾದಕರ ವಾತಾವರಣ, ಋಣಾತ್ಮಕ ಭಾವನೆ ಹೋಗಿ ಧನಾತ್ಮ ಚಿಂತನೆ ಮೂಡುತ್ತಿದೆ. ಹಾಗಾಗಿ ದಿನೇ ದಿನೇ ಧ್ಯಾನ ಮಂದಿರಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದೆ. ವಿಶೇಷ ದಿನಗಳಲ್ಲಿ ಸಿದ್ದಗಂಗಾ ಪಿಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳು ಸೇರಿದಂತೆ ಇತರ ಸ್ವಾಮೀಜಿಗಳು ಧ್ಯಾನಾಸಕ್ತರಾಗುವ ಮೂಲಕ ತಮ್ಮ ಗುರುವರ್ಯರ ದರ್ಶನ ಮಾಡುತ್ತಿದ್ದಾರೆ.