ಬೆಂಗಳೂರು: ರಾಜಧಾನಿಯಿಂದ 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ತುಮಕೂರು ರಸ್ತೆ ಫ್ಲೈ ಓವರ್ (ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಮೇಲೆ ಏಪ್ರಿಲ್ 13 ರಿಂದ 17 ರವರೆಗೆ ನಿಗದಿಯಾಗಿದ್ದ ಸಂಚಾರ ನಿಷೇಧವನ್ನು ಸದ್ಯಕ್ಕೆ ಮುಂದೂಡಲಾಗಿದೆ.
ಪೀಣ್ಯ ಫ್ಲೈಓವರ್ ರಸ್ತೆಯಲ್ಲಿ (Peenya Flyover) ಅಂತಿಮ ಲೋಡ್ ಪರೀಕ್ಷೆ ನಡೆಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸಿದ್ದತೆ ನಡೆಸಿತ್ತು. ಫ್ಲೈಓವರ್ ಗೆ ಹೊಸದಾಗಿ 1422 ಕೇಬಲ್ ಅಳವಡಿಕೆ ಹಿನ್ನೆಯಲ್ಲಿ ಲೋಡ್ ಪರೀಕ್ಷೆ (Load Testing) ನಡೆಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು ಸಂಚಾರ ಪೊಲೀಸ್ (Bengaluru Traffic Police) ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆದುಕೊಂಡಿತ್ತು. ಇದನ್ನೂ ಓದಿ: ಅಬ್ದುಲ್ ಜಬ್ಬಾರ್ ರಾಜೀನಾಮೆ ಅಂಗೀಕರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್
ಈಗ ಬೆಂಗಳೂರು ಸಂಚಾರ ಪೊಲೀಸರ ಕೋರಿಕೆಯ ಮೇರೆಗೆ ಅಂತಿಮ ಲೋಡ್ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು NHAI ತಿಳಿಸಿದೆ. ಲೋಡ್ ಪರೀಕ್ಷೆಯ ಪರಿಷ್ಕೃತ ದಿನಾಂಕಗಳನ್ನು ಸೂಕ್ತ ಸಮಯದಲ್ಲಿ ತಿಳಿಸಲಾಗುವುದು ಎಂದು ತಿಳಿಸಿದೆ.
ಪರೀಕ್ಷೆ ಮುಂದೂಡಿಕೆಯಾಗಿದ್ದರಿಂದ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಎಂದಿನಂತೆ ವಾಹನ ಸಂಚಾರಕ್ಕೆ ಮುಕ್ತವಾಗಿರುತ್ತದೆ.

