– ಸೋಲಿಸಲು 45 ದಿನ ದುಡಿದಿದ್ದಾರೆ
– ಷಡ್ಯಂತ್ರಗಳ ಅನುಭವ ಪಡೆದೆ
– ಇಂಟರ್ ನ್ಯಾಷನಲ್ ಸ್ಟಾರ್ ಮಾಡಿದಕ್ಕೆ ಧನ್ಯವಾದ
ತುಮಕೂರು: ಮಂಡ್ಯ ಲೋಕಸಭಾ ಚುನಾವಣೆ ಇಡೀ ದೇಶ ಗಮನಿಸುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಆದರೆ ನಾನು ಆ ಚುನಾವಣೆಯಲ್ಲಿ ಸೋತರೂ ಹಲವು ಷಡ್ಯಂತ್ರಗಳ ಅನುಭವ ಪಡೆದಿದ್ದೇನೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಲೋಕಸಭಾ ಚುನಾವಣೆಯ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.
ತುಮಕೂರು ತಾಲೂಕಿನ ಹೊನ್ನುಡಿಕೆಯಲ್ಲಿ ಕನ್ನಡ ಸಂಘಟನೆಯವರು ಏರ್ಪಡಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನಗೆ ಚುನಾವಣೆಗೆ ಸ್ಪರ್ಧಿಸಲು ಇಷ್ಟ ಇರಲಿಲ್ಲ. ಮುಖಂಡರ ಒತ್ತಾಯದ ಮೇರೆಗೆ ಸ್ಪರ್ಧಿಸಿದ್ದೆ. ಆದರೆ ನನ್ನ ಸೋಲಿಸಲು ಸುಮಾರು 45 ದಿನ ಊಟ ತಿಂಡಿ ಬಿಟ್ಟು, ನಿದ್ದೆ ಮಾಡದೇ ದುಡಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಮೈತ್ರಿ ಧರ್ಮ ಪಾಲನೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Advertisement
Advertisement
ನಾನು ಸೋತಿದ್ದರೂ ಅಲ್ಲಿಯ ಅನುಭವ ಅಪಾರ. ಕುರುಕ್ಷೇತ್ರದ ಅಭಿಮನ್ಯು ನಿಜ ಜೀವನದಲ್ಲೂ ಅಭಿಮನ್ಯುವಾದ ಅನುಭವ ಪಡೆದಿದ್ದೇನೆ. ಕುರುಕ್ಷೇತ್ರದಲ್ಲಿ ಘಂಟೆ ಭಾರಿಸಿದ ಬಳಿಕ ಮತ್ತೆ ಯುದ್ಧ ಮಾಡುವಂತಿಲ್ಲ. ಆದರೆ ನನಗೆ ಯುದ್ಧ ಮುಗಿದರೂ ಹಿಂದಿನಿಂದ ಬಂದು ಹಿತ ಶತ್ರುಗಳು ತಿವಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
Advertisement
ಕೆ.ಆರ್ ಪೇಟೆಯಲ್ಲಿ ಕಳೆದ ಬಾರಿ ನಾರಾಯಣಗೌಡರ ಟಿಕೆಟ್ ಘೋಷಣೆ ಮಾಡಿದ್ದು ನಾನೇ. ತಂದೆಯವರ ಅನುಮತಿ ಮೇರೆಗೆ ಕಾರ್ಯಕ್ರಮವೊಂದರಲ್ಲಿ ನಾನೇ ಟಿಕೆಟ್ ಘೋಷಣೆ ಮಾಡಿದ್ದೆ ಎಂದು ಹೇಳುವ ಮೂಲಕ ನಾರಾಯಣ ಗೌಡರೂ ಲೋಕಸಭೆಯಲ್ಲಿ ತನ್ನ ಕೈಹಿಡಿದಿಲ್ಲ ಅನ್ನೋದನ್ನ ಸೂಚ್ಯವಾಗಿ ಹೇಳಿದರು.
Advertisement
ಶಾಸಕನಾದ ಬಳಿಕ ನಾರಾಯಣ ಗೌಡ ಮುಖ್ಯಮಂತ್ರಿಗಳ ಬಳಿ ತಾಲೂಕಿನ ಜನರ ಸಮಸ್ಯೆಗಳನ್ನು ತರುತ್ತಿರಲಿಲ್ಲ. ತನಗೇನೂ ಲಾಭ ಆಗುತ್ತಿಲ್ಲವಲ್ಲ ಎಂದು ವೈಯಕ್ತಿಕ ವಿಚಾರವನ್ನು ತರುತಿದ್ದರು ಎಂದು ದೂರಿದರು.
ಇದೇ ವೇಳೆ ರಾಜ್ಯದ ಈಗಿನ ಮುಖ್ಯಮಂತ್ರಿಗಳ ಹಿಂದೆ ಅವರ ಮಕ್ಕಳು ಸುತ್ತುತಿರುತ್ತಾರೆ. ಫೈಲ್ ಹಿಡಿದುಕೊಂಡು ಅಧಿಕಾರಿಗಳಿಗೆ ಫೋನ್ ಮಾಡುತ್ತಿರುತ್ತಾರೆ. ಆದರೆ ನಾನೂ ನಮ್ಮಪ್ಪನ 14 ತಿಂಗಳ ಅಧಿಕಾರವಧಿಯಲ್ಲಿ ಯಾವತ್ತೂ ಮೂಗು ತೋರಿಸಿಲ್ಲ ಎಂದರು.
ಎಲ್ಲಿದ್ದೀಯಪ್ಪಾ ನಿಖಿಲ್ ಎಂದು ಟ್ರೋಲ್ ಮಾಡುವ ಮೂಲಕ ನನ್ನನ್ನು ಮಾನಸಿಕವಾಗಿ ಕೊಲ್ಲಲು ಪ್ರಯತ್ನ ಪಟ್ಟರು. ಆದರೂ ಪರವಾಗಿಲ್ಲ ನನ್ನ ಇಂಟರ್ ನ್ಯಾಷನಲ್ ಸ್ಟಾರ್ ಮಾಡಿದಕ್ಕೆ ಧನ್ಯವಾದ ಎಂದು ಹೇಳಿದರು.