ತುಮಕೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಆತ್ಮಸಾಕ್ಷಿಯಾಗಿ ಮತದಾನ ಮಾಡಿ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿಯವರು ಕರೆ ಕೊಟ್ಟಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠದ 116 ನೇ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಸಿದ್ದಲಿಂಗ ಮಹಾಸ್ವಾಮಿಗಳು ಮತಗಟ್ಟೆಗೆ ಬಂದು ಮತದಾನ ಚಲಾವಣೆ ಮಾಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ಆತ್ಮಸಾಕ್ಷಿಯಾಗಿ ಮತದಾನ ಮಾಡಿ ಎಂದರು.
Advertisement
Advertisement
ರಾಜ್ಯದ 14 ಕ್ಷೇತ್ರಗಳಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಮತಹಾಕುವ ಅಧಿಕಾರ ಇದೆ. ನಮ್ಮ ದೇಶದ ಪ್ರಜಾಪ್ರಭುತ್ವ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಎಲ್ಲಾ ದೇಶಗಳು ಕೂಡ ಈ ಪ್ರಜಾಪ್ರಭುತ್ವವನ್ನು ಅನುಸರಿಸುವ ರೀತಿಯಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಎಂದು ಹೇಳಿದ್ರು.
Advertisement
ಇಲ್ಲಿ ಪ್ರತಿಯೊಬ್ಬರಿಗೂ ಕೂಡ ನಮ್ಮ ಸಂವಿಧಾನ ಹಕ್ಕು ಮತ್ತು ಕರ್ತವ್ಯಗಳನ್ನು ಕೊಟ್ಟಿದೆ. ನಾವೆಲ್ಲರೂ ಮೊದಲು ಪ್ರಜೆಗಳಾಗಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ಈ ಮತದಾನ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಆತ್ಮಸಾಕ್ಷಿಯಾಗಿ, ಯಾರೇ ಇಚ್ಛೆ ಇರಲಿ, ಯಾವುದೇ ಪಕ್ಷ ಇರಲಿ ಅವರಿಗೆ ಮತ ಹಾಕಬೇಕಾಗಿರುವುದು ಪ್ರತಿಯೊಬ್ಬ ವ್ಯಕ್ತಿಯ ಆದ್ಯ ಕರ್ತವ್ಯವಾಗಿದೆ. ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕಾಗಿದೆ. ಅಲ್ಲದೆ ಈ ವ್ಯವಸ್ಥೆಯಲ್ಲಿ ನಾವು ಪಾಲ್ಗೊಳ್ಳಬೇಕಾಗಿದೆ ಎಂದು ಮನವಿ ಮಾಡಿದರು.
Advertisement
ಪ್ರತಿಯೊಬ್ಬರೂ ಕೂಡ ಮತದಾನ ಮಾಡುವ ಮೂಲಕ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಪ್ರಜೆಗಳಾಗಿ ನಮ್ಮ ಕರ್ತವ್ಯವನ್ನು ಚೆನ್ನಾಗಿ ನಿರ್ವಹಿಸಬೇಕು ಎಂಬುದಾಗಿ ಇದೇ ವೇಳೆ ಮತದಾರರಲ್ಲಿ ಮನವಿ ಮಾಡಿಕೊಂಡ ಅವರು, ನಾನು ಕೂಡ ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ ಎಂದು ತಿಳಿಸಿದರು.
ನಮ್ಮ ದೇಶದಲ್ಲಿ ನೂರಕ್ಕೆ ನೂರು ಮತದಾನ ಆಗದೇ ಇರುವುದು ನಮ್ಮ ದೌರ್ಭಾಗ್ಯ. ಯಾಕಂದ್ರೆ ನಮ್ಮ ದೇಶದಲ್ಲಿ ಮತದಾನ ಕಡ್ಡಾಯ ಮಾಡದೇ ಇರುವುದೇ ಇದಕ್ಕೆ ಕಾರಣವಾಗಿದೆ. ಆದರೂ ಕೂಡ ಜನತೆ ಇದನ್ನು ಅರ್ಥ ಮಾಡಿಕೊಂಡು ತಮ್ಮ ಜವಾಬ್ದಾರಿ ಎಂದು ತಿಳಿದು ಮತ ಚಲಾಯಿಸಲೇ ಬೇಕು. ಈ ಮೂಲಕ ನಮ್ಮದೇ ಆದ ಭದ್ರ ಸರ್ಕಾರವನ್ನು ರಚನೆ ಮಾಡಲು ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಇದೊಂದು ಅವಕಾಶ. ಹೀಗಾಗಿ ಪ್ರಜೆಗಳು ತಮಗೆ ಒಪ್ಪಿಗೆ ಆಗುವಂತಹ ಓರ್ವ ಪ್ರತಿನಿಧಿಯನ್ನು ಆರಿಸಿ ಎಂದರು.