ತುಮಕೂರು: ಸಿಎಂ ಯಡಿಯೂರಪ್ಪ ಅವರು ಮೋದಿಯಷ್ಟೇ ಪವರ್ ಫುಲ್ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ಹೇಳುವ ಮೂಲಕ ಬಿಎಸ್‍ವೈ ಪರ ಬ್ಯಾಟಿಂಗ್ ಮಾಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಹೇಗೆ ಪ್ರಧಾನಿ ಮೋದಿ ಪ್ರಭಾವ ಇದೆಯೋ ಅದೇ ರೀತಿ ಕರ್ನಾಟಕದಲ್ಲಿ ಯಡಿಯೂರಪ್ಪರ ಪ್ರಭಾವ ಅಷ್ಟೇ ಇದೆ ಎಂದು ಬಿಎಸ್‍ವೈ ಅವರನ್ನು ಹಾಡಿ ಹೊಗಳಿದ್ದಾರೆ.
ಯಡಿಯೂರಪ್ಪನವರಿಗೆ ವಯಸ್ಸಾಗಿರಬಹುದು ಆದರೂ ಅವರಿಗೆ ಸಾಧಿಸುವ ವಿಲ್ ಪವರ್, ಉತ್ಸಾಹ ಇದೆ. ಅವರು ಈಗ ಅಧಿಕಾರಕ್ಕೆ ಬಂದಿದ್ದಾರೆ. ಹಿಂದಿನ ಸರ್ಕಾರ ಕೊಡದಿದ್ದ ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಬೇಗ ಬಿಡುಗಡೆ ಮಾಡಲಿ. ರೈತರ ಸಾಲ ಮನ್ನಾದ ಹಣವನ್ನೂ ಬಿಡುಗಡೆ ಮಾಡಲಿ ಎಂದು ರಾಜಣ್ಣ ಆಗ್ರಹ ಮಾಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಶಾಸಕರು ಯಾರೂ ಬಿಸ್‍ವೈ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಹೋಗಬಾರದು ಎಂದು ಹೇಳಿದ್ದರೂ ತಾನು ಹೋಗಿದ್ದಕ್ಕೆ ಸ್ಪಷ್ಟನೆ ನೀಡಿದ ರಾಜಣ್ಣ, ನಾನು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾಗಿ ಯಡಿಯೂರಪ್ಪ ಅವರ ಪ್ರಮಾಣ ವಚನಕ್ಕೆ ಹೋಗಿದ್ದೇನೆ. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಖಡಕ್ಕಾಗಿ ತಿಳಿಸಿದ್ದಾರೆ.
ಕುದುರೆ ವ್ಯಾಪಾರ ಮತ್ತು ಭ್ರಷ್ಟ ಮಾರ್ಗದಲ್ಲಿ @BSYBJP ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಅಸಂವಿಧಾನಿಕ ಮತ್ತು ಅನೈತಿಕ.
ಇದು ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದೆ.
ಈ ಅಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ನಿರಾಕರಿಸುತ್ತೇನೆ, ಪಕ್ಷದ ಎಲ್ಲಾ ನಾಯಕರುಗಳಿಗೆ ಭಾಗವಹಿಸದಂತೆ ಸೂಚನೆ ನೀಡುತ್ತೇನೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 26, 2019
ಬಿಎಸ್‍ವೈ ಅವರು ಶುಕ್ರವಾರ ಸಂಜೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮಾಡಿ, ಪ್ರಮಾಣ ವಚನ ಕಾರ್ಯಕ್ರಮಕ್ಕೆ ನಾನೂ ಹೋಗಲ್ಲ. ಯಾರೂ ಹೋಗಬಾರದು ಎಂದು ಸೂಚನೆ ನೀಡಿದ್ದರು.