ತುಮಕೂರು: 40 ಸಾವಿರಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿರುವ ಐಎಂಎ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರವೇ ಇಲ್ಲಾ, ಮಳೆ ಬೆಳೆ ಇಲ್ಲಾ, ಶವ ಸಂಸ್ಕಾರಕ್ಕೂ ನೀರಿಲ್ಲದ್ದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಸ್ಥಿತಿಯಲ್ಲಿ 40 ಸಾವಿರ ಜನರ ಹಣವನ್ನು ಮನ್ಸೂರ್ ಅಲಿಖಾನ್ ತಿಂದು ಬಿಟ್ಟಿದ್ದಾನೆ ಎಂದು ಕಿಡಿಕಾರಿದರು.
ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಈ ಪ್ರಕರಣದಲ್ಲಿ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಕೋಟ್ಯಾಂತರ ರೂಪಾಯಿ ಹೋಗಿರುವ ಅನುಮಾನ ಇದೆ. ಪ್ರಕರಣವನ್ನು ಮುಚ್ಚಿಹಾಕುವ ದೃಷ್ಠಿಯಲ್ಲಿ ಎಸ್‍ಐಟಿಯನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಐಎಂಎ ಕೇಸನ್ನು ಕೂಡಲೇ ಸಿಬಿಐಗೆ ವಹಿಸಲೇಬೇಕು ಎಂದು ಆಗ್ರಹಿಸಿದರು.