– ಅಸಲಿ ಮದುವೆ, ನಕಲಿ ಹೆಣ್ಣು, ಪಾಪದ ಹುಡುಗನ ಕಹಾನಿ
ತುಮಕೂರು: ಇದು ಮದುವೆ (Marriage) ಆಲೋಚನೆಯಲ್ಲಿರೋ ಅವಿವಾಹಿತರು ನೋಡಲೇಬೇಕಾದ ಸ್ಟೋರಿ. ಸಿಕ್ಕಿದ್ದೇ ಸೀರುಂಡೆ ಅಂತ ಕಣ್ಮುಚ್ಚಿಕೊಂಡು ಹೆಣ್ಣು ಒಪ್ಪಿಕೊಳ್ಳುವುದಕ್ಕೂ ಮುನ್ನ ಈ ಸ್ಟೋರಿಯನ್ನೊಮ್ಮೆ ನೋಡಿಬಿಡಿ. ವಯಸ್ಸು ಮೀರಿ ಹೋಗ್ತಿದೆ ಅಂತ ಆತುರಪಟ್ಟರೇ ಮಕ್ಮಲ್ ಟೋಪಿ ಗ್ಯಾರಂಟಿ. ಇದಕ್ಕೆ ತಾಜಾ ಉದಾಹರಣೆ ಅನ್ನೋದಕ್ಕೆ ತುಮಕೂರಿನಲ್ಲಿ (Tumkur) ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಅಷ್ಟಕ್ಕೂ ಆ ಅಸಲಿ ಮದುವೆ.. ನಕಲಿ ಹೆಣ್ಣು.. ಪಾಪದ ಹುಡುಗನ ಕಹಾನಿ ಏನು ಅಂತೀರಾ? ಮುಂದೆ ಓದಿ…
ಹೌದು. ವಯಸ್ಸು ಮೀರಿದ ಯುವಕರನ್ನೇ ಟಾರ್ಗೆಟ್ ಮಾಡಿ ದೋಖಾ ಮಾಡ್ತಿದ್ದ ಗ್ಯಾಂಗ್ ಈಗ ಪೊಲೀಸರಿಗೆ ಅತಿಥಿಯಾಗಿದೆ. ಯುವಕರಿಗೆ ಮದುವೆ ಮಾಡಿಸುವುದಾಗಿ ಹೇಳಿ, ನಂತರ ಅವರಿಂದ ಹಣ, ಒಡವೆ ದೋಚಿ ಪರಾರಿಯಾಗುತ್ತಿದ್ದ ಖತರ್ನಾಕ್ ಗ್ಯಾಂಗ್‌ವೊಂದನ್ನ ತುಮಕೂರಿನ ಗುಬ್ಬಿ ಪೊಲೀಸರು (Gubbi Police) ಬಂಧಿಸಿ ಜೈಲಿಗಟ್ಟಿದ್ದಾರೆ. ರಾಜ್ಯದ ಹಲವೆಡೆ ಯುವಕರನ್ನ ಯಾಮಾರಾರಿ ಮದುವೆ ಮಾಡಿಕೊಂಡಿದ್ದ ಐನಾತಿಯೂ ತಗಲಾಕ್ಕೊಂಡಿದ್ದಾಳೆ.
Advertisement
Advertisement
ಏನಿದು ಪ್ರಕರಣ?
ಇದು ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಅತ್ತಿಗಟ್ಟೆ ಗ್ರಾಮದಲ್ಲಿ ನಡೆದಿದ್ದ ಕಥೆ. ಗ್ರಾಮದ ಪಾಲಾಕ್ಷಯ್ಯ ಎಂಬುವವರು ತಮ್ಮ ಮಗನಿಗೆ ಹೆಣ್ಣು ಸಿಗದೇ ಪರದಾಡಿದ್ರು. ಮಗ ದಯಾನಂದಮೂರ್ತಿಗೆ 37 ವರ್ಷ ದಾಟಿದ್ರೂ ಹೆಣ್ಣು ಸಿಗದೇ ಕುಟುಂಬಸ್ಥರು ನೊಂದಿದ್ದರು. ನೂರಾರು ಹೆಣ್ಣು ಹುಡುಕಿದ್ರೂ ಕಂಕಣ ಭಾಗ್ಯ ಕೂಡಿಬಂದಿರಲಿಲ್ಲ. ಹತ್ತಾರು ಮದುವೆ ಬ್ರೋಕರ್‌ಗಳ ಮೂಲಕ ಹೆಣ್ಣು ಹುಡುಕಿಸಿದ್ದರೂ ಪ್ರಯೋಜನವಾಗಲಿಲ್ಲ.
Advertisement
ಈ ಸಂದರ್ಭದಲ್ಲೇ ಕುಷ್ಟಗಿ ಮೂಲದ ಬಸವರಾಜು ಎಂಬವರ ಮೂಲಕ ಹುಬ್ಬಳಿಯ ಲಕ್ಷ್ಮಿ ಎಂಬಾಕೆಯ ಪರಿಚಯವಾಗಿತ್ತು. ಮದುವೆ ಬ್ರೋಕರ್ ಕೆಲಸ ಮಾಡುತ್ತಿದ್ದ ಲಕ್ಷ್ಮಿ ಬಳಿ ಮಗನಿಗೆ ಹೆಣ್ಣು ತೋರಿಸುವಂತೆ ಪಾಲಾಕ್ಷಯ್ಯ ಕೇಳಿಕೊಂಡಿದ್ದರು. ಇವರ ಪರಿಸ್ಥಿತಿಯನ್ನು ಚೆನ್ನಾಗಿ ಬಳಸಿಕೊಂಡ ಲಕ್ಷ್ಮಿ ಹುಬ್ಬಳ್ಳಿಯಲ್ಲೊಬ್ಬಳು ಒಳ್ಳೆ ಹುಡುಗಿ ಇದ್ದಾಳೆ, ಆಕೆಗೆ ತಂದೆ-ತಾಯಿ ಇಲ್ಲ ನೀವೇ ಮದುವೆ ಮಾಡಿಕೊಳ್ಳಬೇಕೆಂದು ಕಥೆ ಕಟ್ಟಿದ್ದಳು. ʻಕೋಮಲಾʼ ಎಂಬ ಹೆಸರಿನಲ್ಲಿ ಹುಡುಗಿಯ ಫೋಟೋ ಕಳುಹಿಸಿ, ಆಕೆಯನ್ನೂ ಗಂಡಿನ ಮನೆಗೆ ಕರೆದುಕೊಂಡು ಬಂದಿದ್ದಳು. ಕೋಮಲಾ ಜೊತೆಗೆ ಆಕೆಯ ಸಂಬಂಧಿಕರು ಅಂತ ಹೇಳಿಕೊಂಡು ಇನ್ನೂ ಐದಾರು ಜನ ಬಂದಿದ್ದರು.
Advertisement
ಮಾತುಕತೆ ಮರುದಿನವೇ ಮದುವೆ:
ಕಳೆದ ವರ್ಷ ನವೆಂಬರ್ 11ರಂದು ಅತ್ತಿಗಟ್ಟೆಗೆ ಬಂದಿದ್ದ ನಕಲಿ ಕುಟುಂಬ ಪಾಲಾಕ್ಷಯ ಕುಟುಂಬಸ್ಥರೊಂದಿಗೆ ಮದುವೆ ಮಾತುಕತೆಯನ್ನೂ ನಡೆಸಿದ್ದರು. ಹೆಣ್ಣು ಸಿಕ್ಕ ಖುಷಿಯಲ್ಲಿ ಹಿಂದೆಮುಂದೆ ಯೋಚಿಸದೇ ಪಾಲಾಕ್ಷಯ್ಯ ಮಾತುಕತೆ ನಡೆಸಿದ್ದ ಮರುದಿನವೇ ಗ್ರಾಮದ ದೇವಸ್ಥಾನದಲ್ಲೇ ಮದುವೆ ಮಾಡಿ ಮುಗಿಸಿದ್ದರು. ಮದುವೆ 200ಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. ಅಲ್ಲದೇ ಹೆಣ್ಣಿಗೆ ಚಿನ್ನದ ಸರ, ತಾಳಿ, ಕಿವಿಗೆ ಓಲೆ ಸೇರಿ 25 ಗ್ರಾಂ ಚಿನ್ನಾಭರಣ ಸಹ ಹಾಕಿದ್ದರು. ಮದುವೆ ಮುಗಿಯುತ್ತಿದ್ದಂತೆ ಹೆಣ್ಣು ತೋರಿಸಿದ ಬ್ರೋಕರ್ ಲಕ್ಷ್ಮಿಗೆ 1.5 ಲಕ್ಷ ಹಣ ನೀಡಿದ್ದರು. ಹೆಣ್ಣಿನ ಕಡೆಯವರು ಅಂತ 8 ಜನರನ್ನ ಕರೆ ತಂದಿದ್ದ ಬ್ರೋಕರ್ ಲಕ್ಷ್ಮಿ, ಮದುವೆ ಮುಗಿದ ಎರಡು ದಿನದ ನಂತರ ಯುವತಿಯೊಬ್ಬಳನ್ನೇ ವಾಪಸ್ ಕರೆದುಕೊಂಡ ಹೋಗಿದ್ದಳು.
ಸಂಪ್ರದಾಯದ ಕಾರಣ ನೀಡಿ ಯುವತಿಯನ್ನ ಮಾತ್ರ ಕರೆದುಕೊಂಡು ಹೋಗಿದ್ದ ಲಕ್ಷ್ಮಿ, ಹಣ-ಚಿನ್ನದ ಒಡವೆ ಸಹಿತ ಮದುಮಗಳನ್ನ ಕರೆದುಕೊಂಡು ಹೋಗಿದ್ದಳು. ವಾರ ಕಳೆದರೂ ವಾಪಸ್ ಬರದೇ ಇದ್ದಾಗ ಆತಂಕಗೊಂಡ ಪಾಲಾಕ್ಷಯ್ಯ ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ ಸತ್ಯ ಬಯಲಾಗಿದೆ. ನಡೆದದ್ದು ನಕಲಿ ಮದುವೆ, ಬಂದವರು ದೋಖಾ ಗಿರಾಕಿಗಳು ಎಂಬ ಸತ್ಯ ಬಯಲಾಗಿದೆ. ವಾಪಸ್ ಗುಬ್ಬಿಗೆ ಬಂದ ಪಾಲಾಕ್ಷಯ್ಯ ಎಲ್ಲರ ವಿರುದ್ಧ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಗುಬ್ಬಿ ಪೊಲೀಸರು ನಿರಂತರ ತನಿಖೆ ನಡೆಸಿದ್ದರು. ಸತತ 1 ವರ್ಷದ ಬಳಿಕ ದೋಖಾ ಗಿರಾಕಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಮಹಾರಾಷ್ಟ್ರ, ಹುಬ್ಬಳ್ಳಿಯಲ್ಲಿ ನಾಲ್ವರನ್ನ ಗುಬ್ಬಿ ಪೊಲೀಸರು ಬಂಧಿಸಿದ್ದಾರೆ. ಮದುಮಗಳು ಕೋಮಲಾ ಅಲಿಯಾಸ್ ಲಕ್ಷ್ಮಿ ಬಾಳಸಾಬ್ ಜನಕರ, ಚಿಕ್ಕಪ್ಪ ಪಾತ್ರಧಾರಿ ಸಿದ್ದಪ್ಪ, ಚಿಕ್ಕಮ್ಮ ಪಾತ್ರಧಾರಿ ಲಕ್ಷ್ಮೀಬಾಯಿ, ಬ್ರೋಕರ್ ಲಕ್ಷ್ಮಿ ಬಂಧಿತರು.