ಮುಂಬೈ: ಬಾಲಿವುಡ್ ನಲ್ಲಿ ಈಗ ವಿದ್ಯಾ ಬಾಲನ್ ನಟನೆಯ `ತುಮಾರಿ ಸುಲು’ ಸಿನಿಮಾದ ಮಾತುಗಳು ಕೇಳಿ ಬರುತ್ತಿವೆ. ಇಂದು ತುಮಾರಿ ಸುಲು ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ನೋಡುಗರನ್ನು ನಗೆ ಕಡಲಿನಲ್ಲಿ ತೇಲಿಸುತ್ತಿದೆ.
ಒಬ್ಬ ಮಧ್ಯ ವಯಸ್ಕ ಗೃಹಿಣಿಯ ಪಾತ್ರದಲ್ಲಿ ವಿದ್ಯಾ ಈ ಬಾರಿ ಬಣ್ಣ ಹಚ್ಚಿದ್ದಾರೆ. ಸಂಸಾರದ ಜವಾಬ್ದಾರಿಯ ನಡುವೆ ತನ್ನ ಆಸೆಗಳನ್ನು ಪೂರ್ಣಗೊಳಿಸಿಕೊಳ್ಳುವ ಸುಂದರವಾದ ಕಥೆಯನ್ನು ಸಿನಿಮಾ ಹೊಂದಿದೆ. ಆರ್‍ಜೆ ಕಾರ್ಯಕ್ರಮದ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾ ಪ್ರೆಶರ್ ಕುಕ್ಕರ್ ಗೆಲ್ಲುತ್ತಾರೆ. ರೇಡಿಯೋ ಚಾನೆಲ್ ಮುಖ್ಯಸ್ಥೆಯಾಗಿ ನಟಿ ನೇಹಾ ದೂಪಿಯಾ ಕಾಣಿಸಿಕೊಂಡಿದ್ದಾರೆ.
ಪ್ರಶಸ್ತಿ ಪಡೆಯಲು ತೆರಳುವ ವಿದ್ಯಾ ತಾನು ಆರ್‍ಜೆ ಕೆಲಸ ಖಾಲಿ ಎಂಬ ಬೋರ್ಡ್ ನೋಡುತ್ತಾರೆ. ವಿದ್ಯಾ ತಾವು ಆರ್‍ಜೆ ಆಗುವ ಇಂಗಿತವನ್ನು ನೇಹಾ ದೂಪಿಯಾ ಮುಂದೆ ಹೇಳಿಕೊಂಡಾಗ `ಸಾರಿ ವಾಲಿ ಬಾಬಿ’ ಎಂಬ ವಿಶೇಷ ಕಾರ್ಯಕ್ರಮವನ್ನೇ ಆಯೋಜನೆ ಮಾಡುತ್ತಾರೆ.
ಮಧುರ, ಸಿಹಿಯಾದ ಧ್ವನಿ ಮೂಲಕ ವಿದ್ಯಾ ಕೇಳುಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ. ಈ ನಡುವೆ ಕೆಲಸ ಮಧ್ಯೆ ಬ್ಯುಸಿಯಾಗುವ ವಿದ್ಯಾರ ಪತಿ ಅಸಮಾಧಾನ ವ್ಯಕ್ತಪಡಿಸುತ್ತಾರೆ. ವೈಯಕ್ತಿಕ ಮತ್ತು ವೃತ್ತಿ ಜೀವನವನ್ನು ಹೇಗೆ ವಿದ್ಯಾ ಎದುರಿಸುತ್ತಾರೆ ಎಂಬುದನ್ನು ಸಿನಿಮಾ ತೋರಿಸುತ್ತದೆ. ಈ ನಡುವೆ ಪತಿ-ಪತ್ನಿ ನಡುವಿನ ಹಾಸ್ಯ ಸನ್ನಿವೇಶಗಳು ಮತ್ತು ಆರ್‍ಜೆ ಕೆಲಸ ಮಾಡುವಾಗ ಹಾಸ್ಯ ದೃಶ್ಯಗಳು ನೋಡುಗರನ್ನು ನಗೆಯಲ್ಲಿ ತೇಲಿಸುತ್ತದೆ.
ಟ್ರೇಲರ್ ನಲ್ಲಿ ಎಂದಿನಂತೆ ವಿದ್ಯಾ ತಮ್ಮ ನಟನೆಯಿಂದ ಭರವಸೆಯನ್ನು ಮೂಡಿಸಿದ್ದಾರೆ. ಟ್ರೇಲರ್ ಸಹ ಕಲರ್ ಫುಲ್ ಆಗಿ ಮೂಡಿ ಬಂದಿದೆ. ಸಿನಿಮಾಗೆ ಸುರೇಶ್ ತ್ರಿವೇಣಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ತುಮಾರಿ ಸುಲು ನಿಮ್ಮನ್ನು ನಗಿಸಲು ನವೆಂಬರ್ 17ರಂದು ಬರಲಿದ್ದಾಳೆ.