ತುಮಕೂರು: ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ತುಮಕೂರಿನ ಸಿದ್ದಗಂಗಾ ಮಠದ ಕಿರಿಯ ಶ್ರಿಗಳು ಸ್ವಾಗತಿಸಿದ್ದಾರೆ.
ಈ ಕುರಿತು ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕೇಂದ್ರದಲ್ಲಿ ಯಾವ ನಿರ್ಣಯ ತೆಗೆದುಕೊಳ್ತಾರೆ ಅನ್ನೋದನ್ನು ಕಾದು ನೋಡಬೇಕು. ವೀರಶೈವ ಮತ್ತು ಲಿಂಗಾಯತ ಎರಡನ್ನೂ ಸೇರಿಸಿ ಶಿಫಾರಸ್ಸು ಮಾಡಿರೋದು ಖುಷಿ ತಂದಿದೆ. ಎಲ್ಲರೂ ಜೊತೆಯಲ್ಲಿ ಹೋಗಬೇಕು ಅನ್ನೋದು ನಮ್ಮ ಆಶಯ ಅಂತ ಕಿರಿಯ ಶ್ರೀ ಸಿದ್ದಲಿಂಗಸ್ವಾಮಿಗಳು ತಿಳಿಸಿದ್ದಾರೆ.
ಲಿಂಗಾಯತ ವೀರಶೈವ ಬಹಳ ವರ್ಷದಿಂದ ಹಿಂದೂ ಧರ್ಮದ ಒಂದು ಭಾಗವಾಗಿ ಬಂದಿದೆ. ಜೈನ ಧರ್ಮ ಹಾಗೂ ಬೌದ್ಧ ಧರ್ಮ ಪ್ರತ್ಯೇಕವಾದ್ರೂ ಹಿಂದೂ ಧರ್ಮದ ಆಚರಣೆ ಒಳಗೊಂಡಿದೆ. ಲಿಂಗಾಯತ ಪ್ರತ್ಯೇಕ ಧರ್ಮದಿಂದ ಹಿಂದೂ ಧರ್ಮಕ್ಕೆ ಧಕ್ಕೆ ಬರುವುದಿಲ್ಲ. ಪ್ರತ್ಯೇಕತೆ ಸಿಕ್ಕಿದ್ರೂ ಹಿಂದೂ ಧರ್ಮದ ಆಚರಣೆಗಳು ಜೊತೆಯಲ್ಲಿ ನಡೆದುಕೊಂಡು ಹೋಗುತ್ತದೆ. ಬಸವಣ್ಣರನವರ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ ಹಾಗೂ ಮತ್ತಿತರ ಸೌಲಭ್ಯಗಳಿಗೆ ಅನುಕೂಲವಾಗುತ್ತದೆ ಎನ್ನುವ ದೊಡ್ಡ ಕಾರಣವನ್ನು ಕಂಡುಕೊಂಡಿದ್ದಾರೆ. ಸಂಪುಟದಲ್ಲಿ ನಿರ್ಣಯ ಮಾಡುವ ಮುನ್ನ ಇದಕ್ಕೊಂದು ಸಮಿತಿ ರಚನೆ ಮಾಡಿ, ಆ ಸಮಿತಿಯ ವರದಿಯ ಆಧಾರದ ಮೇಲೆ ಮತ್ತೆ ಸಮಿತಿಯವರು ಒಂದಾಗಿ ಮಹತ್ವದ ನಿರ್ಧಾರ ತೆಗೆದುಕೊಂಡು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ ಅಂತ ಹೇಳಿದ್ರು.
ಎಲ್ಲರೂ ಹೊಂದಿಕೊಂಡು ಹೋಗುವುದೇ ಮುಖ್ಯವಾಗಿರುವುದು. ಬಸವಣ್ಣ ಹೇಳಿರುವುದು ಇಷ್ಟೇ “ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ.. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ” ಎಂಬ ಭಾವನೆ ಇರುವುದರಿಂದ ಎಲ್ಲರನ್ನೂ ಒಳಗೊಂಡು ಹಾಗೂ ಎಲ್ಲರ ಜೊತೆ ಹೋಗುವುದು ಸಂತೋಷ, ನೆಮ್ಮದಿ. ಎಲ್ಲವನ್ನೂ ಪ್ರತ್ಯೇಕವಾಗಿ ಮಾಡಿಕೊಂಡು ಹೋದ್ರೆ ಯಾವುದಕ್ಕೂ ನೆಮ್ಮದಿ ಇರುವುದಿಲ್ಲ ಅಂದ್ರು.
ಇದು ಬಹಳ ವರ್ಷದಿಂದಲೂ ಹಿಂದೂ ಧರ್ಮದ ಭಾಗವಾಗಿ ನಡೆದುಕೊಂಡು ಬರುತ್ತಿದೆ. ಇಂದು ಜೈನ ಧರ್ಮದಲ್ಲೂ ಹಿಂದೂ ಧರ್ಮದ ಅನೇಕ ತತ್ವಗಳನ್ನು ಪಾಲಿಸುತ್ತಿದ್ದಾರೆ. ಹೀಗಾಗಿ ಹಿಂದೂ ಧರ್ಮ ವಿಶಾಲವಾಗಿದ್ದು, ಅದಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಅಂದ್ರು.
ವೀರಶೈವರಿಂದ ಸರ್ಕಾರದ ನಿರ್ಧಾರಕ್ಕೆ ವಿರೋಧವಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಈ ಬಗ್ಗೆ ನಾವೇನು ಹೇಳಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ತಮ್ಮ ವೈಯಕ್ತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಲು ಹಕ್ಕಿದೆ. ಒಟ್ಟಿನಲ್ಲಿ ಹಿಂದೂ ಧರ್ಮದಿಂದ ಪ್ರತ್ಯೇಕವಾಗಿ ಸ್ವತಂತ್ರ ಧರ್ಮ ಅನ್ನೋ ಮಾನ್ಯತೆ ಸಿಕ್ಕಿದಾಗ ಹಿಂದೂ ಧರ್ಮದಲ್ಲೇ ಇರುತ್ತದೆ ಅನ್ನೋದಿಕ್ಕೆ ಸಾಧ್ಯವಿಲ್ಲ ಅಂತ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ರು.
ಸೋಮವಾರ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಕ್ಯಾಬಿನೆಟ್ ಸಭೆ ನಡೆದಿದ್ದು, ಈ ವೇಳೆ ನ್ಯಾ.ನಾಗಮೋಹನ್ ದಾಸ್ ಸಮಿತಿಯ ಸದಸ್ಯರ ಅಭಿಪ್ರಾಯದಂತೆ ಲಿಂಗಾಯತ ಮತ್ತು ವೀರಶೈವರಾಗಿದ್ದು ಬಸವ ತತ್ವವವನ್ನು ಅನುಸರಿಸುತ್ತಿರುವ ಮಂದಿಗೆ ಪ್ರತ್ಯೇಕ ಧರ್ಮದ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಈ ಮೂಲಕ ಶತ ಶತಮಾನಗಳಿಂದ ಹಿಂದೂ ಧರ್ಮದ ಭಾಗವಾಗಿ ಇದ್ದ ವೀರಶೈವ-ಲಿಂಗಾಯತರು ಇನ್ಮೇಲೆ ಹಿಂದೂಗಳಲ್ಲ. ಅವರು ಅಲ್ಪಸಂಖ್ಯಾತರು. ಹೀಗೆಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರ್ಣಯ ತೆಗೆದುಕೊಂಡಿತ್ತು.