Districts

ಸಿದ್ದಗಂಗಾ ಮಠಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್ ಕಾಮಗಾರಿ ವಿಳಂಬ- ಭಕ್ತಾದಿಗಳಿಂದ ಆಕ್ರೋಶ

Published

on

Share this

ತುಮಕೂರು: ಕಳೆದ ಎರಡು ವರ್ಷಗಳಿಂದ ಸಿದ್ದಗಂಗಾ ಮಠಕ್ಕೆ ಆಗಮಿಸುವ ಭಕ್ತಾದಿಗಳು ನಿತ್ಯಕಿರಿಕಿರಿ ಅನುಭವಿಸುತ್ತಿದ್ದಾರೆ. ಕ್ಯಾತಸಂದ್ರ ಸರ್ಕಲ್ ನಿಂದ ಮಠ ಕೇವಲ 200 ಮೀಟರ್ ದೂರದಲ್ಲಿದ್ದರೂ ಸುಮಾರು 2 ಕಿಮಿ ದೂರ ಸುತ್ತಿಬಳಸಿ ಬರುವ ಅನಿವಾರ್ಯತೆ ಇದೆ. ಇಷ್ಟೆಲ್ಲಾ ಸಮಸ್ಯೆಗೆ ಮೂಲ ಕಾರಣ ಮಠಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಅರ್ಧಕ್ಕೆ ನಿಂತಿರೋದು.

ಕ್ಯಾತಸಂದ್ರ ಸರ್ಕಲ್ ನಿಂದ ಸಿದ್ದಗಂಗಾ ಮಠಕ್ಕೆ ಕೇವಲ 200 ಮೀಟರ್ ದೂರ ಅಷ್ಟೇ. ರೈಲ್ವೆಗೇಟ್ ಮೂಲಕ ಇಷ್ಟು ದಿನ ಭಕ್ತಾದಿಗಳು ಶ್ರೀಮಠಕ್ಕೆ ಹೋಗುತ್ತಿದ್ದರು. ಆಗಾಗ ರೈಲ್ವೆಗೇಟ್ ಹಾಕೊದ್ರಿಂದ ಸಂಚಾರಕ್ಕೆ ಅಡ್ಡಿಯಾಗುತಿತ್ತು. ಮಠದ ಭಕ್ತಾದಿಗಳಿಗೆ ಈ ಕಿರಿಕಿರಿ ತಪ್ಪಿಸಲು ರೈಲ್ವೆ ಅಂಡರ್ ಪಾಸ್ ನಿರ್ಮಿಸಿ ಕೊಡಲು ರೇಲ್ವೆ ಇಲಾಖೆ ಒಪ್ಪಿಕೊಂಡಿತ್ತು.

2019 ನವೆಂಬರ್ ತಿಂಗಳಿಂದ ಕಾಮಗಾರಿಯನ್ನೂ ಆರಂಭಿಸಿತ್ತು. ರೈಲ್ವೆ ಇಲಾಖೆ ಅಂಡರ್ ಪಾಸ್ ಕಾಮಗಾರಿ ಪೂರ್ಣಗೊಳಿಸಿದರೂ ಅಂಡರ್ ಪಾಸ್ ನಂತರದ ರಸ್ತೆ ನಿರ್ಮಾಣ ಕೆಲಸ ನೆನೆಗುದಿಗೆ ಬಿದ್ದಿದೆ. ಈ ರಸ್ತೆ ನಿರ್ಮಾಣ ಜವಾಬ್ದಾರಿ ಲೋಕೋಪಯೋಗಿ ಇಲಾಖೆಯದ್ದು. ರಸ್ತೆ ನಿರ್ಮಾಣಕ್ಕೆ ಬೇಕಾದ ಭೂಮಿ ಸ್ವಾಧೀನಪಡಿಸಿಕೊಂಡು ಬೇಗ ಕಾಮಗಾರಿ ಆರಂಭ ಮಾಡಬೇಕಿದ್ದ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಮೌನವಹಿಸಿದ್ದಾರೆ. ಪರಿಣಾಮ ಭಕ್ತಾದಿಗಳಿಗೆ ತೊಂದರೆಯಾಗುತ್ತಿದೆ.  ಇದನ್ನೂ ಓದಿ: ಸರ್ಕಾರದಿಂದ್ಲೇ ಹುಚ್ಚಗಣಿ ದೇವಸ್ಥಾನ ಪುನರ್ ನಿರ್ಮಾಣ- ಸಂಪುಟ ಸಭೆಯಲ್ಲಿ ತೀರ್ಮಾನ ನಿರೀಕ್ಷೆ

ರಸ್ತೆ ನಿರ್ಮಾಣಕ್ಕೆ ವಶಪಡಿಸಿಕೊಳ್ಳಲಾಗುವ ಭೂಮಿಗೆ ನೀಡುವ ಪರಿಹಾರದಲ್ಲಿ ತಾರತಮ್ಯ ಮಾಡುತ್ತಿರುವುದರಿಂದ ಮೂರ್ನಾಲ್ಕು ಜನರು ಜಾಗ ನೀಡಲು ಒಪ್ಪುತ್ತಿಲ್ಲ. ವಾಣಿಜ್ಯ ಉದ್ದೇಶದಿಂದ ಪರಿವರ್ತನೆಯಾದ ಒಂದು ಅಡಿ ಜಾಗಕ್ಕೆ 3700 ರೂ ಪರಿಹಾರ ನಿಗದಿ ಮಾಡಿದರೆ, ಕಂದಾಯ ಭೂಮಿಗೆ ಅಡಿಯೊಂದಕ್ಕೆ 700 ರೂ. ಪರಿಹಾರ ನಿಗದಿ ಮಾಡಿದ್ದಾರೆ. ಇದರಿಂದ ಕಂದಾಯ ಭೂಮಿ ಹೊಂದಿರುವ ನಾಲ್ಕು ಜನರು ರಸ್ತೆಗೆ ಜಾಗಬಿಟ್ಟುಕೊಡಲು ಒಪ್ಪುತಿಲ್ಲ. ತಮಗೂ ವಾಣಿಜ್ಯ ಭೂಮಿಗೆ ಕೊಟ್ಟ ದರವೇ ನಿಗದಿ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಈ ಕಾರಣದಿಂದಾಗಿ ರಸ್ತೆ ಕಾಮಗಾರಿ ಆರಂಭವಾಗಿಲ್ಲ.

ಇನ್ನು ಅಂಡರ್ ಪಾಸ್ ಕಾಮಗಾರಿ ಆರಂಭವಾದ ದಿನದಿಂದ ರೈಲ್ವೆಗೇಟ್ ಮುಚ್ಚಲಾಗಿದೆ. ಪರಿಣಾಮ ಭಕ್ತಾದಿಗಳು ಬಟವಾಡಿ ಮೂಲಕ ಹಾದು ಎಚ್ ಎಮ್ ಟಿ ಮೂಲಕ ಮಠಕ್ಕೆ ಸುತ್ತಿಬಳಸಿ ಬರಬೇಕು. ಅತ್ತ ಸ್ವಾಮಿಜಿಗಳು, ಮಠದ ವಿದ್ಯಾರ್ಥಿಗಳೂ 2-3 ಕಿಮಿ ದೂರ ಸುತ್ತಿಬಳಸಿ ಓಡಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಭೂಮಿ ಮಾಲೀಕರು- ಲೊಕೋಪಯೋಗಿ ಇಲಾಖೆ ನಡುವಿನ ನಾ…ಕೊಡೆ, ನೀ..ಬಿಡೆ ಧೋರಣೆಯಿಂದಾಗಿ ಭಕ್ತಾಧಿಗಳು, ಮಠದ ವಿದ್ಯಾರ್ಥಿಗಳು ನಿತ್ಯಕಿರಿಕಿರಿ ಅನುಭವಿಸುವಂತಾಗಿದೆ.

Click to comment

Leave a Reply

Your email address will not be published. Required fields are marked *

Advertisement
Advertisement