ತುಮಕೂರು: ಇಡೀ ಪ್ರಪಂಚವನ್ನೇ ಬೆಚ್ಚಿಬೀಳಿಸಿರೋ ಕೊರೊನಾ ವೈರಸ್ ಬಿಸಿ ತುಮಕೂರಿನ ಸಿದ್ದಗಂಗಾ ಮಠಕ್ಕೂ ತಟ್ಟಿದೆ. ಮಠಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದ್ದು, ಮಠದ 10 ಸಾವಿರ ವಿದ್ಯಾರ್ಥಿಗಳನ್ನು ಕೂಡಲೇ ಪರೀಕ್ಷೆ ಮುಗಿಸಿ ಊರಿಗೆ ಕಳುಹಿಸಲು ನಿರ್ಧರಿಸಲಾಗಿದೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ವಿದ್ಯಾರ್ಥಿಗಳನ್ನು ತಮ್ಮ ಊರಿನತ್ತ ಕಳುಹಿಸಲು ನಿರ್ಧರಿಸಲಾಗಿದೆ. ಏಪ್ರಿಲ್ 5ರಂದು ಆಚರಿಸಲು ನಿರ್ಧರಿಸಿದ್ದ ಶಿವೈಕ್ಯ ಶಿವಕುಮಾರ ಶ್ರೀಗಳ 113ನೇ ಜಯಂತಿಗೂ ಕೊರೊನಾ ಎಫೆಕ್ಟ್‍ನಿಂದಾಗಿ ಬ್ರೇಕ್ ಹಾಕಲಾಗಿದೆ. ಜಿಲ್ಲಾಡಳಿತದಿಂದ ಅನುಮತಿ ಸಿಗದ ಹಿನ್ನೆಲೆ ಸದ್ಯಕ್ಕೆ ಕಾರ್ಯಕ್ರಮ ನಡೆಸದಂತೆ ಬ್ರೇಕ್ ಹಾಕಲಾಗಿದೆ.
Advertisement
Advertisement
ಈ ಕುರಿತಾಗಿ ಸಿದ್ದಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ಸ್ಪಷ್ಟಪಡಿಸಿದ್ದಾರೆ. ಮಠದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿರುವುದರಿಂದ ಸರ್ಕಾರದ ನಿರ್ದೇಶನದಂತೆ ಎಲ್ಲಾ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಪರೀಕ್ಷೆ ಮುಗಿಸಿ ತಮ್ಮ ಊರುಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಎಲ್ಲೂ ಹೆಚ್ಚಿನ ಜನರು ಸೇರದಂತೆ ಆದೇಶಿಸಿರುವ ಸರ್ಕಾರದ ನಿಯಮದಂತೆ ಮಠದಲ್ಲೂ ಮಕ್ಕಳನ್ನು ಒಟ್ಟಿಗೆ ಸೇರದಂತೆ ಎಲ್ಲಾ ಕ್ರಮಗಳನ್ನ ಜರುಗಿಸಲಾಗಿದೆ ಎಂದು ತಿಳಿಸಿದರು.