ತುಮಕೂರು: ಕ್ಷುಲ್ಲಕ ಕಾರಣಕ್ಕೆ ಅತ್ತೆ-ಸೊಸೆ ಜಗಳ ಮಾಡಿಕೊಂಡು ಪರಸ್ಪರ ಬೆಂಕಿ ಹಚ್ಚಿಕೊಂಡು ಇಬ್ಬರೂ ಸಾವನ್ನಪ್ಪಿದ ವಿಲಕ್ಷಣ ಘಟನೆ ತುಮಕೂರು ತಾಲೂಕಿನ ಗಂಗಸದ್ರದಲ್ಲಿ ನಡೆದಿದೆ.
ಸೊಸೆ ರಾಜೇಶ್ವರಿ (45) ಹಾಗೂ ಅತ್ತೆ ಪಾರ್ವತಮ್ಮ (75) ಮೃತರು. ಇಂದು ಕ್ಷುಲ್ಲಕ ಕಾರಣಕ್ಕೆ ಅತ್ತೆ-ಸೊಸೆ ನಡುವೆ ಜಗಳ ಆರಂಭವಾಗಿದೆ. ಜಗಳವಾಡುತ್ತಾ ತಮ್ಮ ಮನೆಯ ಬಾಗಿಲನ್ನು ಒಳಗಡೆಯಿಂದ ಲಾಕ್ ಮಾಡಿಕೊಂಡು ಮನೆಯಲ್ಲಿದ್ದ ಥಿನ್ನರ್ (ಪೈಂಟ್‍ಗೆ ಬಳಸುವ ವಸ್ತು) ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪರಸ್ಪರ ಒಬ್ಬರಿಗೊಬ್ಬರು ಥಿನ್ನರ್ ಎರಚಿ ಬೆಂಕಿ ಹಚ್ಚಿಕೊಂಡಿದ್ದಾರೋ ಅಥವಾ ಯಾವ ರೀತಿ ಬೆಂಕಿ ಹಚ್ಚಿಕೊಂಡಿದ್ದಾರೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಈ ವೇಳೆ ಒಳಗಡೆಯಿಂದ ಇಬ್ಬರ ಕಿರುಚಾಟ, ನೋವು ಸ್ಥಳೀಯರಿಗೆ ಕೇಳಿಸಿದೆ. ಅಲ್ಲದೇ ಹೊಗೆ ಕೂಡ ಬರುತಿತ್ತು ಕಾರಣ ಬಾಗಿಲು ತೆರೆದು ನೋಡಿದಾಗ ಇಬ್ಬರೂ ಸಾವನ್ನಪ್ಪಿದ್ದಾರೆ. ಇದನ್ನು ಓದಿ: ಅತ್ತೆಯ ಜೊತೆಗೆ ಸೊಸೆಯ ಅನೈತಿಕ ಸಂಬಂಧ – ಇಬ್ಬರನ್ನು ಇರಿದು ಕೊಂದ ನಿವೃತ್ತ ಶಿಕ್ಷಕ
ಪಾರ್ವತಮ್ಮನ ಮಗ ಶಿವಕುಮಾರ್ ಪೈಂಟ್ ಕೆಲಸ ಮಾಡಿಕೊಂಡಿದ್ದು, ಪತ್ನಿ ರಾಜೇಶ್ವರಿಯನ್ನು ಮದುವೆಯಾಗಿ ಗಂಗಸಂದ್ರದ ಪತ್ನಿಯ ತವರು ಮನೆಯಲ್ಲಿಯೇ ವಾಸವಿದ್ದರು. ಕಳೆದ ಆರು ತಿಂಗಳ ಹಿಂದೆ ಶಿವಕುಮಾರ್ ತಾಯಿ ಪಾರ್ವತಮ್ಮರನ್ನ ಬೀರನಕಲ್ಕು ಗ್ರಾಮದಿಂದ ಕರೆದುಕೊಂಡು ಹೋಗಿ ಜೊತೆಯಲ್ಲಿ ಇರಿಸಿಕೊಂಡಿದ್ದರು. ಶಿವಕುಮಾರ್ ತನ್ನ ತಾಯಿಯನ್ನು ಕರೆದುಕೊಂಡು ಬಂದ ಕಾರಣ ರಾಜೇಶ್ವರಿ ಪ್ರತಿನಿತ್ಯ ಕಿರಿಕ್ ಮಾಡಿ ಜಗಳವಾಡುತ್ತಿದ್ದರಂತೆ. ಅದು ಇಂದು ವಿಕೋಪಕ್ಕೆ ಹೋಗಿ ಇಬ್ಬರು ಮೃತಪಟ್ಟಿರಬಹದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಈ ಸಂಬಂಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.