– ರಸ್ತೆಯಲ್ಲಿ ಬಿದ್ದಿರುವ ಸೋಪಿಗೆ ಮುಗಿಬಿದ್ದ ಜನ
ತುಮಕೂರು: ಲಾರಿಗೆ ಹಿಂಬದಿಯಿಂದ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತುಮಕೂರಿನ ಊರುಕೆರೆ ಬಳಿ ಅಪಘಾತದಲ್ಲಿ 17 ಮಂದಿಗೆ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಸಾವನ್ನಪ್ಪಿದವರನ್ನು ಚಿಕ್ಕೋಡಿಯ ರಾಮಪ್ಪ ಎಲೆಬಳ್ಳಿ (40), ಬೆಳಗಾವಿ ಮೂಲದ ತಸ್ರುಲ್ಲಾ (30) ಹಾಗೂ ಬಸ್ ಕ್ಲೀನರ್ ಫಜಲ್ (26) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ತುಮಕೂರಿನಲ್ಲಿ ಇತ್ತೀಚೆಗೆ ಖಾಸಗಿ ಬಸ್ ಪಲ್ಟಿಯಾಗಿ ೫ ಮಂದಿ ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಂಭವಿಸಿದೆ.
ಹುಬ್ಬಳ್ಳಿ ಕಡೆಯಿಂದ ಬೆಂಗಳೂರಿನತ್ತ ಬರುತ್ತಿದ್ದ ಖಾಸಗಿ ಬಸ್ ವೇಗವಾಗಿ ಬಂದು ಸೋಪು ತುಂಬಿದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ ಮುಂಭಾಗ ನುಜ್ಜಾಗಿದ್ದು, ಮುಂದೆ ಕುಳಿತ್ತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಪಲ್ಟಿಯಾಗಿದ್ದು, ಲಾರಿ ಒಳಗೆ ಇದ್ದ ಸೋಪ್ ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದನ್ನು ಕಂಡ ಜನರು ಚೀಲ ತಂದು ತುಂಬಿಕೊಂಡು ಹೋಗುತ್ತಿದ್ದಾರೆ.
ಅಪಘಾತವಾದ ಪರಿಣಾಮ ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದ್ದು, ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಬಂದು ಟ್ರಾಫಿಕ್ ಕ್ಲೀಯರ್ ಮಾಡಿ ಮೃತ ದೇಹಗಳನ್ನು ಆಸ್ಪತ್ರೆ ರವಾನೆ ಮಾಡಿ ದೂರು ದಾಖಲಿಸಿಕೊಂಡಿದ್ದಾರೆ.