ತುಮಕೂರು: ಎಲ್‍ಐಸಿ ಖಾಸಗೀಕರಣವಿಲ್ಲವೆಂದು ಬೆಂಗಳೂರು ಭಾರತೀಯ ಜೀವ ವಿಮಾ ನಿಗಮದ ಸೀನಿಯರ್ ಡಿವಿಜನಲ್ ಮ್ಯಾನೇಜರ್ ಆಶೀಶ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ಸರ್ಕಾರದ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಸರ್ಕಾರದ ಆಯವ್ಯಯ ಮುಂಗಡ ಪತ್ರದಲ್ಲಿ ಎಲ್‍ಐಸಿಯ ಸರ್ಕಾರಿ ಸ್ವಾಮ್ಯದ ಬಂಡವಾಳದಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆಯಲ್ಲಿ ಶೇ. 10ರಷ್ಟು ಷೇರುಗಳನ್ನು ತೊಡಗಿಸಲಿದೆ ಎಂದು ಘೋಷಿಸಿದ್ದಾರೆ. ಈ ಹಿನ್ನೆಲೆ ಭಾನುವಾರ ತುಮಕೂರಿನ ಬಿ.ಹೆಚ್.ರಸ್ತೆಯಲ್ಲಿರುವ ಭಾರತೀಯ ಜೀವ ವಿಮಾ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆಶೀಶ್‍ಕುಮಾರ್ ಅವರು, ಎಲ್‍ಐಸಿಯನ್ನು ಖಾಸಗೀಕರಣಗೊಳಿಸುತ್ತಾರೆ ಎಂಬ ಸುಳ್ಳು ವದಂತಿ ಸಾರ್ವಜನಿಕರಲ್ಲಿ ಹರಿದಾಡುತ್ತಿದ್ದು ಇದು ತಪ್ಪು ಮಾಹಿತಿಯಾಗಿದೆ, ಎಲ್‍ಐಸಿ ಖಾಸಗೀಕರಣವಿಲ್ಲವೆಂದು ತಿಳಿಸಿದರು.
ವಿತ್ತ ಸಚಿವರು ಎಲ್‍ಐಸಿಯ 100ರಷ್ಟು ಷೇರುಗಳಲ್ಲಿ ಶೇ. 10ರಷ್ಟು ಷೇರುಗಳನ್ನು ಆಸಕ್ತರಿಗೆ ಮಾರಾಟ ಮಾಡುತ್ತದೆ ಎಂದು ಹೇಳಿದ್ದಾರಷ್ಟೆ. ಆದರೆ ಖಾಸಗೀಕರಣದ ಬಗ್ಗೆ ಸಚಿವರು ಮಾತನಾಡಿರುವುದಿಲ್ಲ. ಭಾರತೀಯ ಜೀವ ವಿಮಾ ನಿಗಮ ಬೆಂಗಳೂರು ವಿಭಾಗ 1ರ ವ್ಯಾಪ್ತಿಯಲ್ಲಿ 20 ಶಾಖೆಗಳು ಮತ್ತು 10 ಉಪಶಾಖೆಯನ್ನು ಹೊಂದಿದ್ದು, ಪ್ರಸಕ್ತ ವರ್ಷದ ಈವರೆಗೂ 1,48,703 ಪಾಲಿಸಿಗಳನ್ನು ಪೂರ್ಣಗೊಳಿಸಿ 518.10 ಕೋಟಿಯಷ್ಟು ಪ್ರಥಮ ಪ್ರೀಮಿಯಂ ಹಣವನ್ನು ಸಂಗ್ರಹಿಸಿರುತ್ತದೆ ಎಂದರು.
ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಶಾಖೆಗಳಿಂದ 51,878 ಪಾಲಿಸಿಗಳನ್ನು ಪೂರ್ಣಗೊಳಿಸಿ 72.44 ಕೋಟಿಯಷ್ಟು ಪ್ರಥಮ ಪ್ರೀಮಿಯಂ ಹಣವನ್ನು ಸಂಗ್ರಹಿಸಿರುತ್ತದೆ. ಕಳೆದ ವರ್ಷ ಭಾರತೀಯ ಜೀವ ವಿಮಾ ನಿಗಮ 53 ಸಾವಿರ ಕೋಟಿ ಲಾಭ ಗಳಿಸಿದ್ದು, ಅದರಲ್ಲಿ ಶೇ. 95ರಷ್ಟು ಲಾಭವನ್ನು ನಿಗಮದ ಪಾಲಿಸಿದಾರರಿಗೆ ಬೋನಸ್ ರೂಪದಲ್ಲಿ ವಿತರಿಸಲಾಗಿದೆ. ನಿಗಮವು ಕೇಂದ್ರ ಸರ್ಕಾರದ ಸ್ವಾಮ್ಯದ ಸಂಸ್ಥೆಯಾಗಿರುವುದರಿಂದ ಶೇ. 5ರಷ್ಟು ಅಂದರೆ 2,600 ಕೋಟಿ ರೂ. ಲಾಭದ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ಚೆಕ್ ಮೂಲಕ ನೀಡಲಾಗಿದೆ ಎಂದು ಅವರು ಹೇಳಿದರು.
ನಿಗಮದಿಂದ ಸರ್ವೈವಲ್ ಬೆನಿಫಿಟ್ 79,649 ಪಾಲಿಸಿಗಳ 349.80ಕೋಟಿ ರೂ. ಪಾಲಿಸಿದಾರರಿಗೆ ಸಂದಾಯ ಮಾಡಲಾಗಿದೆ, 66,503 ಮೆಚ್ಯುರಿಟಿ ದಾವೆಯಲ್ಲಿ 718.30ಕೋಟಿ ಪಾಲಿಸಿದಾರರಿಗೆ ಸಂದಾಯ ಮಾಡಲಾಗಿದೆ. 5,850 ಮರಣ ದಾವೆಯಲ್ಲಿ 106.14 ಕೋಟಿ ಪಾಲಿಸಿಯ ನಾಮಿನಿಗೆ ಹಣ ಸಂದಾಯ ಮಾಡಲಾಗಿದೆ. ಭಾರತೀಯ ಜೀವ ವಿಮಾ ನಿಗಮವು 30 ಕೋಟಿಗೂ ಹೆಚ್ಚಿನ ಪಾಲಿಸಿದಾರರನ್ನು ಹೊಂದಿರುವ ಕೇಂದ್ರ ಸರ್ಕಾರ ಸ್ವಾಮ್ಯದ ಬಹುದೊಡ್ಡ ಸಂಸ್ಥೆಯಾಗಿದ್ದು, ಇದರಲ್ಲಿ 11,79,229 ಪ್ರತಿನಿಧಿಗಳು ಕಾರ್ಯನಿರ್ವಹಿಸುತ್ತಿದ್ದು, 1,08,684 ಉದ್ಯೋಗಿಗಳು ಕ್ಷಮತೆ ಹಾಗೂ ದಕ್ಷತೆಯಿಂದ ಪಾಲಿಸಿದಾರರ ಹಿತಾಸಕ್ತಿ ಹಾಗೂ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ನಿಗಮವು 31,11,84,728 ಕೋಟಿಯಷ್ಟು ಮೌಲ್ಯದ ಸ್ವತ್ತನ್ನು ಹೊಂದಿದ್ದು, 28,28,32,012 ಕೋಟಿ ಮೊತ್ತದ ಲೈಫ್ ಫಂಡ್ ಹೊಂದಿರುವ ಸದೃಢ ಸಂಸ್ಥೆಯಾಗಿದೆ. ಕೇಂದ್ರ ಸರ್ಕಾರವು ಭಾರತೀಯ ಜೀವ ವಿಮಾ ನಿಗಮದಿಂದ ನೀಡುವ ಹಣದಲ್ಲಿ ಸಾಮಾಜಿಕ ಕಳಕಳಿ ದೃಷ್ಟಿಯಿಂದ ಕುಡಿಯುವ ನೀರು, ವಿದ್ಯುತ್, ರಸ್ತೆ, ರೈಲ್ವೆ ಹಾಗೂ ಗೃಹ ನಿರ್ಮಾಣದಂತಹ ಸಾರ್ವಜನಿಕ ಯೋಜನೆಗಳಲ್ಲಿ ಗರಿಷ್ಠ ಪ್ರಮಾಣದ ಹೂಡಿಕೆ ಮಾಡುತ್ತಿದೆ. ಇದರಿಂದ ಸಾರ್ವಜನಿಕ ಹಣಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ರುಜುವಾತು ಮಾಡಿದೆ ಎಂದರು.
ಕಳೆದ 63 ವರ್ಷಗಳಿಂದ ಜನರ ವಿಶ್ವಾಸ ಗಳಿಸಿರುವ ಭಾರತೀಯ ಜೀವ ವಿಮಾ ನಿಗಮವು ಭೂಮಿಯ ಮೇಲೆ ಜನರಿರುವವರೆಗೂ ಶಾಶ್ವತವಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದರು. ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ವಿಭಾಗದ ಮಾರ್ಕೆಟಿಂಗ್ ಮ್ಯಾನೇಜರ್ ಮುರಳಿ ಮನೋಹರ್, ಸೇಲ್ಸ್ ಮ್ಯಾನೇಜರ್ ಮುರಳೀಧರ್ ಉಪಸ್ಥಿತರಿದ್ದರು.