– 9 ದಿನಗಳಿಂದ ನಿಂತಲ್ಲೆ ಗಣಪನಿಗೆ ಪೂಜೆ
– 500 ವರ್ಷದ ಇತಿಹಾಸದಲ್ಲೇ ಮೊದಲ ಬಾರಿ ಅರ್ಧಕ್ಕೆ ನಿಂತ ಮೆರವಣಿಗೆ
ತುಮಕೂರು: ಇತಿಹಾಸ ಪ್ರಸಿದ್ಧ ಗೂಳೂರು ಗಣಪತಿಯ ವಿಸರ್ಜನಾ ಮೂರ್ತಿ ಅರ್ಧಕ್ಕೆ ನಿಲ್ಲುವ ಮೂಲಕ ಅಚ್ಚರಿ ಹಾಗೂ ಆತಂಕ ಸೃಷ್ಟಿಸಿದೆ. ಸುಮಾರು ಐನೂರು ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿ ವಿಸರ್ಜನೆಗೆಂದು ಹೊರಟ ಗಣೇಶ ಉತ್ಸವ ಮಳೆಯ ಕಾರಣಕ್ಕೆ ಅರ್ಧಕ್ಕೆ ಮೊಟಕುಗೊಂಡಿದೆ.
Advertisement
ಕಳೆದ 9 ದಿನಗಳಿಂದ ಗಣೇಶ ಮೂರ್ತಿಗೆ ನಿಂತಲ್ಲೆ ಪೂಜೆ ಪುನಸ್ಕಾರ ನಡೆಯುತ್ತಿದೆ. ಗಣಪತಿ ಮೆರವಣಿಗೆ ಅರ್ಧಕ್ಕೆ ಮೊಟಕುಗೊಂಡಿದ್ದರಿಂದ ಭಕ್ತಾಧಿಗಳಲ್ಲಿ ಮುಂದೇನಾಗಲಿದೆಯೋ ಎಂಬ ಆತಂಕ ಕಾಡುತ್ತಿದೆ. ದೀಪಾವಳಿ ಹಬ್ಬದಿಂದ ಕಾರ್ತಿಕ ಮಾಸದ ಅಂತ್ಯದವರೆಗೂ ನೆರವೇರುವ ಐತಿಹಾಸಿಕ ಪ್ರಸಿದ್ಧ ತುಮಕೂರಿನ ಗೂಳೂರು ಗಣಪತಿ ದೇವರ ಮೆರವಣಿಗೆ ಅರ್ಧಕ್ಕೆ ಮೊಟಕುಗೊಂಡಿದೆ. ನವೆಂಬರ್ 30 ರಂದು ಮೆರವಣಿಗೆಗೆಂದು ಹೊರಟು ನಿಂತಾಗ ಮಳೆ ಬಂದ ಕಾರಣಕ್ಕೆ ಮೆರವಣಿಗೆ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ವಿಸರ್ಜನೆಗೆಂದು ಮೆರವಣಿಗೆ ಹೊರಟ ಗೂಳೂರು ಗಣೇಶ ಮೂರ್ತಿ ಅರ್ಧದಲ್ಲೆ ನಿಂತಿದೆ. ಮೂಲ ಪೀಠದಿಂದ ಗಣೇಶ ಮೂರ್ತಿಯನ್ನು ಕೆಳಗಿಳಿಸಿ ಮುಖ್ಯದ್ವಾರಕ್ಕೆ ತರುತಿದ್ದಂತೆ ಮಳೆಯ ಕಾರಣಕ್ಕೆ ಮೆರವಣಿಗೆ ಸ್ಥಗಿತಗೊಂಡಿದೆ.
Advertisement
Advertisement
ಸಂಪ್ರದಾಯದ ಪ್ರಕಾರ ಪೀಠದಿಂದ ಒಮ್ಮೆ ಮೂರ್ತಿಯನ್ನು ಎತ್ತಿದ ಮೇಲೆ ಪುನಃ ಪೀಠಕ್ಕೆ ತರುವುದಾಗಲಿ, ವಿಸರ್ಜನೆ ಮಾಡದೇ ಇರುವುದಾಗಲಿ ಮಾಡಬಾರದು ಎಂಬ ಸಂಪ್ರದಾಯ ಇದೆ. ಆದರೆ ನವೆಂಬರ್ 30ರಂದು ಗಣೆಶೋತ್ಸವ ಮೆರವಣಿಗೆ ಹೋಗುತ್ತಿದ್ದಂತೆ ಮಳೆ ಜೋರಾಗಿ ಬರತೊಡಗಿತು. ಹೀಗಾಗಿ ಮೆರವಣಿಗೆ ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಆದ್ದರಿಂದ ಮೂಲ ಪೀಠದಿಂದ ಹೊರತಂದಂತಹ ಗಣೇಶ ಮೂರ್ತಿಯನ್ನು ಅರ್ಧದಲ್ಲೆ ನಿಲ್ಲಿಸಿ ಪೂಜೆ ಮಾಡಲಾಗುತ್ತಿದೆ. ಕಳೆದ 9 ದಿನಗಳಿಂದ ದೇವಸ್ಥಾನದ ಮುಖ್ಯದ್ವಾರದ ಬಾಗಿಲಿನಲ್ಲಿ ಗಣೇಶನ ಮೂರ್ತಿ ಇರಿಸಿ ಪೂಜೆ ಸಲ್ಲಿಸಲಾಗುತ್ತಿದೆ.
Advertisement
ಗೂಳೂರು ಗಣಪತಿಯ ಇತಿಹಾಸದಲ್ಲೇ ವಿಸರ್ಜನಾ ಮೆರವಣಿಗೆ ಅರ್ಧಕ್ಕೆ ನಿಂತಿಲ್ಲ. ಕೆಲವೊಮ್ಮೆ ಮಳೆಯ ಕಾರಣಕ್ಕೆ ಕೆಲ ಗಂಟೆಗಳ ಕಾಲ ಮೆರವಣಿಗೆ ಸ್ಥಗಿತಗೊಂಡಿದ್ದರೂ ಅಂದೇ ಗೂಳೂರು ಕೆರೆಯಲ್ಲಿ ವಿಸರ್ಜನೆ ಮಾಡಲಾಗುತಿತ್ತು. ಆದರೆ ಈ ಬಾರಿ ಮಾತ್ರ ಮೆರವಣಿಗೆ ಹೊರಟು 9 ದಿನ ಕಳೆದರೂ ಗಣಪನಿಗೆ ವಿಸರ್ಜನೆ ಭಾಗ್ಯ ಕೂಡಿ ಬಂದಿಲ್ಲ. ಹಲವು ಪವಾಡ ಹೊಂದಿರುವ ಗೂಳೂರು ಗಣಪತಿಯ ವಿಸರ್ಜನೆಗೆ ಇಷ್ಟೊಂದು ವಿಳಂಬವಾಗಿರುವುದಕ್ಕೆ ಭಕ್ತಾಧಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ದೇವರಾದನೆಯಲ್ಲಿ ಏನಾದರೂ ವ್ಯತ್ಯಾಸ ಆಗಿದೆಯಾ? ಮುಂದೆನಾಗಲಿದೆಯೋ? ಒಳ್ಳೆಯೋದೋ? ಕೆಟ್ಟದೋ ಎಂಬ ಆತಂಕ ಸ್ಥಳೀಯರಲ್ಲಿ ಹಾಗೂ ಭಕ್ತಾಧಿಗಳಲ್ಲಿ ಮನೆಮಾಡಿದೆ.
ಹಿನ್ನೆಲೆ ಏನು?
ಈ ಗಣಪತಿಗೆ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸ ಹಾಗೂ ಅದರದ್ದೆ ಆದ ವಿಶೇಷತೆ ಇದೆ. ಬಾದ್ರಪದ ಶುಕ್ಲಪಕ್ಷದ ಚತುರ್ಥಿಯಂದು ಸಾಮಾನ್ಯವಾಗಿ ಗಣಪತಿ ಹಬ್ಬ ಆಚರಿಸುತ್ತಾರೆ. ಆದರೆ ಗೂಳೂರಿನಲ್ಲಿ ಮಾತ್ರ ಗಣಪತಿ ಹಬ್ಬದಂದು ಗಣೇಶ ಮೂರ್ತಿ ತಯಾರಿಕೆ ಆರಂಭವಾಗಿ ದೀಪಾವಳಿ ದಿನದಂದು ಪ್ರತಿಷ್ಠಾಪನೆ ಆಗುತ್ತದೆ. ಅಲ್ಲಿಂದ ಒಂದು ತಿಂಗಳ ಕಾಲ ಪೂಜೆ ಪುನಸ್ಕಾರ ನಡೆದು ವಿಸರ್ಜನೆ ಮಾಡಲಾಗುತ್ತದೆ.
ಭೃಗಮಹರ್ಷಿಗಳು ಕಾಶಿಯಾತ್ರೆ ಹೊರಟಾಗ ಗಣೇಶ ಚತುರ್ಥಿ ದಿನದಂದು ಗೂಳೂರಿಗೆ ಬಂದು ತಂಗಿದ್ದರಂತೆ. ಅಲ್ಲಿಯೇ ಮಣ್ಣಿನಿಂದ ಗಣೇಶ್ ಮೂರ್ತಿ ತಯಾರಿಸಿ ಪೂಜೆ ಮಾಡಿದ್ದರು ಎಂಬ ಪ್ರತೀತಿ ಇದೆ. ಆಗನಿಂದ ದೀಪಾವಳಿಗೆ ಪ್ರತಿಷ್ಠಾಪನೆ ಮಾಡಿ ಕಾರ್ತಿಕ ಮಾಸ ಕಳೆದ ಮೇಲೆ ಬೃಹತ್ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ. ಆದರೆ ಈ ಬಾರಿ ಗಣೇಶ ಮೆರವಣಿಗೆ ಅರ್ಧಕ್ಕೆ ನಿಂತಿದ್ದು ಭಕ್ತಾಧಿಗಳಲ್ಲಿ ಕಸಿವಿಸಿ ಉಂಟಾಗಿದೆ.
ಸದ್ಯ ಡಿಸೆಂಬರ್ 14-15ರಂದು ವಿಸರ್ಜನಾ ಕಾರ್ಯಕ್ರಮ ನಿಗದಿ ಮಾಡಲಾಗಿದೆ. ಆದರೆ ಹವಾಮಾನ ಇಲಾಖೆ ಮಾಹಿತಿಯಂತೆ ಡಿಸೆಂಬರ್ 14-15 ರಂದು ಮಳೆ ಸಾಧ್ಯತೆ ಕಡಿಮೆ ಇದ್ದು, ಅಂದು ವಿಸರ್ಜನೆ ಮಾಡಲು ಸಮಿತಿ ತೀರ್ಮಾನಿಸಿದೆ.