ತುಮಕೂರು: ನಗರದ ಹೊರವಲಯ ಮಾರನಾಯಕನಹಳ್ಳಿಯಲ್ಲಿ ವ್ಯಕ್ತಿಯೋರ್ವನನ್ನು ಸ್ನೇಹಿತನೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹಣಕಾಸಿನ ವಿಚಾರಕ್ಕೆ ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಸಿದ್ಧಗಂಗಾ ಮಠದಲ್ಲಿ ಕ್ಲರ್ಕ್ ಕೆಲಸ ಮಾಡುತ್ತಾ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದ ಪಾಲನೇತ್ರಯ್ಯ(32) ಕೊಲೆಯಾದ ವ್ಯಕ್ತಿ. ಪಾಲನೇತ್ರಯ್ಯ ಬುಧವಾರ ರಾತ್ರಿ ಊರಿನ ಮುಂಭಾಗದಲ್ಲಿ ಸ್ನೇಹಿತರೊಂದಿಗೆ ಕುಳಿತು ಮಾತನಾಡುವ ವೇಳೆ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ. ಆಟೋದಲ್ಲಿ ಬಂದ ಮೂವರು, ಮಚ್ಚು ಲಾಂಗುಗಳಿಂದ ಪಾಲನೇತ್ರಯ್ಯ ತಲೆಗೆ ಬಲವಾಗಿ ಹೊಡೆದು, ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಇತ್ತ ಪಾಲನೇತ್ರಯ್ಯನ ಹಣ ಕಾಸಿನ ವ್ಯವಹಾರ ಸೇರಿದ್ದಂತೆ ಸಂಬಂಧಿಕರ ನಡುವೆ ಇದ್ದ ಹಳೇ ದ್ವೇಷವೇ ಕೊಲೆಗೆ ಕಾರಣ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
Advertisement
Advertisement
ಮಾರನಾಯಕನಹಳ್ಳಿ ಪಾಳ್ಯದ ನಿವಾಸಿ ಭರತ ಕೊಲೆ ಮಾಡಿದ ಆರೋಪಿಯಾಗಿದ್ದು, ನಾನೇ ಕೊಲೆ ಮಾಡಿದ್ದೇನೆ ಎಂದು ಭರತ್ ಘಟನೆ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಈತನಿಂದ ಪಾಲನೇತ್ರಯ್ಯ 6 ತಿಂಗಳ ಹಿಂದೆ 5 ಸಾವಿರ ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಂಡಿದ್ದನು. ಕೊಟ್ಟ ಸಾಲದ ಹಣವನ್ನು ವಾಪಸ್ ಕೊಡುವಂತೆ ಭರತ ಪಾಲನೇತ್ರಯ್ಯನ ಬಳಿ ಕೇಳಿದಾಗ, ನಿನಗೆ ಸಾಲ ವಾಪಸ್ ಕೊಡುವುದಿಲ್ಲ ಎಂದು ಹೇಳಿದ್ದನು. ಇದರಿಂದ ಕಂಗಲಾದ ಭರತ ಪಾಲನೇತ್ರಯ್ಯನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಭರತ ನೇರವಾಗಿ ಕ್ಯಾತಸಂದ್ರ ಪೊಲೀಸ್ ಠಾಣೆಗೆ ಹೋಗಿ ನಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
Advertisement
Advertisement
ಮಾರನಾಯಕನಹಳ್ಳಿ ಗ್ರಾಮದ ನಿವಾಸಿಗಳು ಹಾಗೂ ಸಂಬಂಧಿಕಾರಾದ ರುದ್ರೇಶ್, ಜಗದೀಶ್, ಎಂ.ಎಸ್ ಕುಮಾರ್, ಮಂಗಳಮ್ಮ, ಜಯಲಕ್ಷ್ಮಿ ಅವರೊಂದಿಗೂ ಪಾಲನೇತ್ರಯ್ಯ ಈ ಹಿಂದೆ ಜಗಳವಾಡಿಕೊಂಡಿದ್ದನು. ಇದೇ ದ್ವೇಷಕ್ಕೆ ಭರತನ ಸಹಾಯ ಪಡೆದ ಸಂಬಂಧಿಕರು ಪಾಲನೇತ್ರಯ್ಯನ ಕೊಲೆಗೆ ಸಂಚು ರೂಪಿಸಿ, ಬುಧವಾರ ರಾತ್ರಿ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಆದರೆ ಭರತ ಇದೀಗ ಪೊಲೀಸರ ವಶದಲ್ಲಿದ್ದು, ಕ್ಯಾತಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಭರತನೊಬ್ಬನೆ ಕೊಲೆ ಮಾಡಿದ್ದಾನಾ ಅಥವಾ ಭರತನಿಗೆ ಪಾಲನೇತ್ರಯ್ಯನ ಸಂಬಂಧಿಕರು ಸಹಕಾರ ನೀಡಿದ್ದಾರಾ ಎನ್ನುವುದು ತನಿಖೆ ಬಳಿಕ ಬಯಲಾಗಲಿದೆ.
ಇತ್ತ ರಾತ್ರಿ ಕೊಲೆ ವಿಚಾರ ತಿಳಿದ ತಕ್ಷಣ ಪಾಲನೇತ್ರಯ್ಯನ ಸಂಬಂಧಿಕರಾದ ರುದ್ರೇಶ, ಜಗದೀಶ, ಗಂಗಣ್ಣ, ಮಂಗಳಮ್ಮ, ಜಯಲಕ್ಷ್ಮಿ ಮನೆ ಖಾಲಿ ಮಾಡಿ ಊರಿನಿಂದ ಕಾಲ್ಕಿತ್ತಿದ್ದಾರೆ. ಸಂಬಂಧಿಕರು ನಾಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ಕ್ಯಾತಸಂದ್ರ ಪೊಲೀಸರು ಭರತನನ್ನು ಇಟ್ಟುಕೊಂಡು ನಾಪತ್ತೆಯಾಗಿರುವ ಸಂಬಂಧಿಕರನ್ನು ಪತ್ತೆ ಹಚ್ಚಲು ಹುಡುಕಾಟ ಪ್ರಾರಂಭಿಸಿದ್ದಾರೆ.