ಚಿತ್ರದುರ್ಗ: ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಕೆಲವು ಕಡೆ ಭೂಸ್ವಾಧೀನ ಪ್ರಕ್ರಿಯೆ ಭಾಗಶಃ ಮುಕ್ತಾಯವಾಗಿದೆ. ಇನ್ನೂ ಕೆಲವು ಕಡೆ ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯದ ಹಂತದಲ್ಲಿದೆ. ಎರಡು ತಿಂಗಳೊಳಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ರೈಲ್ವೆ ಇಲಾಖೆಗೆ ಹಸ್ತಾಂತರಿಸಿ, ನೇರ ರೈಲ್ವೆ ಯೋಜನೆ ಕಾಮಗಾರಿ ಆರಂಭಿಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
Advertisement
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದಾವಣಗೆರೆ, ಚಿತ್ರದುರ್ಗ, ತುಮಕೂರು ನೇರ ರೈಲ್ವೆ ಯೋಜನೆಗೆ 1,800 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ರೈಲ್ವೆ ಇಲಾಖೆ ರೈಟ್ಸ್ ಸಂಸ್ಥೆಗೆ ಅಧಿಕಾರ ನೀಡಿದೆ. ರೈಟ್ಸ್ ಅವರು ಕಾಮಗಾರಿ ಕೈಗೆತ್ತಿಕೊಳ್ಳಲು ಈಗಾಗಲೇ ಅವಶ್ಯಕ ಅಧಿಕಾರಿಗಳನ್ನು ನಿಯೋಜಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ನೇರ ರೈಲ್ವೆ ಯೋಜನೆಗೆ ಸಂಬಂಧಪಟ್ಟಂತೆ ಕಚೇರಿ ಪ್ರಾರಂಭ ಮಾಡಲು ಸಿದ್ಧತೆ ಮಾಡಲಾಗಿದ್ದು, ನವೆಂಬರ್ ತಿಂಗಳಲ್ಲಿ ನೇರ ರೈಲ್ವೆ ಯೋಜನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಉದ್ದೇಶಿಸಲಾಗಿದೆ ಎಂದರು. ಇದನ್ನೂ ಓದಿ: ಚಾರ್ಜ್ ಶೀಟ್‍ನಲ್ಲಿ ಅನುಶ್ರೀ ಆರೋಪಿಯೆಂದು ಉಲ್ಲೇಖವಾಗಿಲ್ಲ: ಮಂಗಳೂರು ಪೊಲೀಸ್ ಆಯುಕ್ತರ ಸ್ಪಷ್ಟನೆ
Advertisement
ದಾವಣಗೆರೆಯಿಂದ ಚಿತ್ರದುರ್ಗದ ಗಡಿವರೆಗೆ 236 ಎಕರೆಯಲ್ಲಿ 209 ಎಕರೆ ಭೂಸ್ವಾಧೀನವಾಗಿದೆ. 27 ಎಕರೆ ಫೈನಲ್ ನೋಟಿಫಿಕೇಷನ್ ಆಗಿದ್ದು, ಆವಾರ್ಡ್ ಆಗಬೇಕಿದೆ. ಸರ್ಕಾರ 82 ಕೋಟಿ ರೂ. ಬಿಡುಗಡೆ ಮಾಡಿದ್ದು, ಈಗಾಗಲೇ 52 ಕೋಟಿ ರೂ. ಪಾವತಿಸಲಾಗಿದೆ. 32 ಎಕರೆಯನ್ನು ಸಂಪೂರ್ಣವಾಗಿ ಹಸ್ತಾಂತರ ಮಾಡಲಾಗಿದ್ದು, ಕಾಮಗಾರಿ ಪ್ರಾರಂಭ ಮಾಡಬೇಕಿದೆ ಎಂದರು.
Advertisement
Advertisement
ತುಮಕೂರಿನ ಊರುಕೇರಿಯಿಂದ ಶಿರಾ ಗಡಿಭಾಗದವರೆಗೆ 159 ಎಕರೆ ಭೂಸ್ವಾಧೀನವಾಗಲಿದೆ. 18 ಕಿ.ಮೀ. ಫೈನಲ್ ನೋಟಿಫಿಕೇಷನ್ ಆಗಿ ಆವಾರ್ಡ್ ಆಗಿ ಹಸ್ತಾಂತರ ಮಾಡಲು ಸಂಪೂರ್ಣ ಕ್ಲಿಯರೆನ್ಸ್ ಇದೆ. ಇದಕ್ಕಾಗಿ 30 ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ಅವಶ್ಯಕತೆ ಇದೆ. ಶಿರಾದಿಂದ ಹಿರಿಯೂರುವರೆಗೆ 638 ಎಕರೆ ಭೂಸ್ವಾಧೀನ ಪ್ರಕ್ರಿಯೆ ಆಗಬೇಕಿದೆ. ಇದರಲ್ಲಿ 48 ಎಕರೆ ಭೂಸ್ವಾಧೀನವಾಗಿದೆ. ಉಳಿದ 202 ಎಕರೆ ಸರ್ಕಾರದಲ್ಲಿ ಆವಾರ್ಡ್‍ಗೆ ಬಾಕಿ ಇದೆ. 179 ಎಕೆರೆ 19 (1) ಆಗಿದೆ. 126 ಎಕರೆ ಆರ್ ಆರ್ ಸಭೆ ಆಗಿದೆ ಹಾಗೂ 91 ಎಕರೆ 11 (1) ಹಂತದಲ್ಲಿದೆ. ಒಟ್ಟು 59 ಕಿ.ಮೀ ಇದೆ. ಇದಕ್ಕೆ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದರೆ ಇನ್ನೂ ಮೂರು ತಿಂಗಳೊಳಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಶಿರಾ ಗಡಿಯಿಂದ ದಾವಣಗೆರೆವರೆಗೂ 105 ಕಿ.ಮೀ ಭೂಸ್ವಾಧೀನವಾಗಬೇಕಿದೆ. ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ ಎರಡು ಹಂತದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, 684 ಎಕರೆ ಬೇರೆ ಬೇರೆ ಹಂತದಲ್ಲಿ ಬಾಕಿ ಇದ್ದು, ಭೂಸ್ವಾಧೀನ ಆಗಬೇಕಿದೆ. ಇದಕ್ಕಾಗಿ ಸರ್ಕಾರ 57 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಇನ್ನೂ ಬಾಕಿ 477 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ನೇರ ರೈಲ್ವೆ ಯೋಜನೆ ಕಾಮಗಾರಿ ಆರಂಭಕ್ಕೆ ತುರ್ತಾಗಿ ರಾಜ್ಯ ಸರ್ಕಾರದಿಂದ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಲು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗುವುದು. ನೇರ ರೈಲ್ವೆ ಮಾರ್ಗದಿಂದಾಗಿ ಭವಿಷ್ಯದಲ್ಲಿ ಚಿತ್ರದುರ್ಗ ಸೇರಿದಂತೆ ದಾವಣಗೆರೆ, ತುಮಕೂರು ಜಿಲ್ಲೆಗಳಿಗೆ ಅನೇಕ ಕೈಗಾರಿಕೀಕರಣ ಪ್ರದೇಶ ಸೇರಿದಂತೆ ಅನುಕೂಲಗಳು ಆಗಲಿವೆ ಎಂದು ತಿಳಿಸಿದರು. ಇದನ್ನೂ ಓದಿ: ಪಾಸಿಟಿವಿಟಿ ರೇಟ್ ಶೇ.0.64ಕ್ಕೆ ಇಳಿಕೆ- ರಾಜ್ಯದಲ್ಲಿಂದು 1,102 ಹೊಸ ಕೊರೊನಾ ಕೇಸ್, 17 ಸಾವು
ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲ್ವೆ ಮಾರ್ಗ ಯೋಜನೆಯ ಚಿತ್ರದುರ್ಗ ವಿಶೇಷ ಭೂಸ್ವಾಧೀನಾಧಿಕಾರಿ ಆರ್.ಚಂದ್ರಯ್ಯ, ತುಮಕೂರು ವಿಶೇಷ ಭೂಸ್ವಾಧೀನಾಧಿಕಾರಿ ಧರ್ಮಪಾಲ್, ದಾವಣಗೆರೆ ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.