ತುಮಕೂರು: ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣವು ಸ್ಮಾರ್ಟ್ ಸಿಟಿ ಯೋಜನೆ ಅಡಿ ಹೈಟೆಕ್ ಸ್ಪರ್ಶ ಪಡೆಯಲಿದೆ. 82.18 ಕೋಟಿ ರೂ. ವೆಚ್ಚದಲ್ಲಿ ಬಹುಮಡಿ `ಸ್ಮಾರ್ಟ್ ಬಸ್ ಟರ್ಮಿನಲ್’ ನಿರ್ಮಿಸಲಾಗುತ್ತಿದೆ.
ನಗರದ ಹೃದಯಭಾಗದಲ್ಲಿ ಏರ್‌ಪೋರ್ಟ್ ಮಾದರಿಯಲ್ಲಿ ತಲೆ ಎತ್ತಲಿರುವ ಬಸ್ ನಿಲ್ದಾಣವು ಹತ್ತು ಹಲವು ಸ್ಮಾರ್ಟ್ ವಿಶೇಷತೆ ಹೊಂದಿದೆ. ಬಿ1, ಬಿ2, ನೆಲಮಹಡಿ ಹಾಗೂ 3 ಅಂತಸ್ತಿನ ಬಸ್ ನಿಲ್ದಾಣವು ಅತ್ಯಾಧುನಿಕವಾಗಿ ನಿರ್ಮಾಣಗೊಳ್ಳಲಿದೆ.
Advertisement
Advertisement
ರಾಜ್ಯ ರಾಜಧಾನಿ ಬೆಂಗಳೂರು ಹೆಬ್ಬಾಗಿಲು ತುಮಕೂರು ಜಿಲ್ಲೆ. ಜಿಲ್ಲೆಯ ಮೂಲಕ ಮಧ್ಯಕರ್ನಾಟಕ ಹಾಗೂ ಉತ್ತರಕರ್ನಾಟಕ ಭಾಗದ ಬಸ್ಸುಗಳು ಹಾದುಹೋಗಲಿದ್ದು, ಪ್ರತಿನಿತ್ಯ 2,400 ಬಸ್ಸುಗಳು ಸಾರಿಗೆ ಬಸ್ ನಿಲ್ದಾಣವನ್ನು ಹಾದುಹೋಗಲಿವೆ. ಬಸ್ ಸಂಚಾರದ ಒತ್ತಡದ ದಟ್ಟಣೆಗೆ ಪರಿಹಾರವಾಗಿ ಸ್ಮಾರ್ಟ್ ಬಸ್ ನಿಲ್ದಾಣ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.
Advertisement
ಬಹುಮಹಡಿ ಬಸ್ ಟರ್ಮಿನಲ್:
ವಿಮಾನ ನಿಲ್ದಾಣ ಮಾದರಿಯಂತೆ ಬಹುಮಹಡಿ ಬಸ್ ಟರ್ಮಿನಲ್ ನಿರ್ಮಿಸುವ ಯೋಜನೆಯನ್ನು ಸ್ಮಾರ್ಟ್ ಸಿಟಿ ಕೈಗೆತ್ತಿಕೊಂಡಿದೆ. ಎರಡೂವರೆ ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಂಡು ಕೆಎಸ್ಆರ್‌ಟಿಸಿಗೆ ಹಸ್ತಾಂತರಿಸಲಾಗುವುದು. ವೈಫೈ, ಇಂಟರ್‌ನೆಟ್ ಸಹಿತ ಅತ್ಯಾಧುನಿಕ ಸಂಪರ್ಕ ಸೌಲಭ್ಯ ಬಸ್ ನಿಲ್ದಾಣದಲ್ಲಿ ಇರಲಿದೆ. ಗುಜರಾತ್ ವಡೋದರದಲ್ಲಿನ ಬಸ್ ಟಿರ್ಮಿನಲ್‍ನಂತೆ ತುಮಕೂರು ಬಸ್ ನಿಲ್ದಾಣ ನಿರ್ಮಾಣಗೊಳ್ಳಲಿದೆ.
Advertisement
ನೆಲಮಹಡಿಯಲ್ಲಿ ಸಿಟಿ ಬಸ್ ನಿಲ್ದಾಣ:
ಹೈಟೆಕ್ ಬಸ್ ಟಿರ್ಮಿನಲ್‍ನ ನೆಲಮಹಡಿಯಲ್ಲಿ ಸಿಟಿ ಬಸ್ ನಿಲ್ದಾಣ ಇರಲಿದೆ. ಸದ್ಯ 50 ಸಿಟಿ ಬಸ್ಸುಗಳು ನಗರದಲ್ಲಿ ಕಾರ್ಯಾಚರಣೆಯಲ್ಲಿದ್ದು, 30 ಬಸ್ಸುಗಳು ನಿಲ್ಲುವ ವ್ಯವಸ್ಥೆ ನಿಲ್ದಾಣದಲ್ಲಿ ಇರಲಿದೆ. ಪ್ರತಿನಿತ್ಯ ನಗರ ಸಾರಿಗೆಯ 1,200 ಟ್ರಿಪ್‍ಗಳನ್ನು ಈ ಬಸ್ಸುಗಳು ಮಾಡಲಿವೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ನಗರ ಸಾರಿಗೆ ಬಸ್ಸುಗಳನ್ನು ಹೆಚ್ಚಳ ಮಾಡುವ ಸಾಧ್ಯತೆಯಿದೆ.
ಬಿ1, ಬಿ2ನಲ್ಲಿ ವಾಹನ ಪಾರ್ಕಿಂಗ್:
ಬೇಸ್ 1, ಬೇಸ್ 2ನಲ್ಲಿ ವಿಶಾಲವಾದ ಅತ್ಯಾಧುನಿಕ ವಾಹನ ಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಬೇಸ್ 1ನಲ್ಲಿ ಕಾರು ಪಾರ್ಕಿಂಗ್‍ಗಾಗಿ ವ್ಯವಸ್ತೆ ಮಾಡಲಾಗುತ್ತದೆ. 167 ನಾಲ್ಕು ಚಕ್ರದ ವಾಹನಗಳನ್ನು ಒಟ್ಟಿಗೆ ಇಲ್ಲಿ ಪಾರ್ಕ್ ಮಾಡಬಹುದು. ಏಕಕಡೆ ಪ್ರವೇಶ ಹಾಗೂ ನಿರ್ಗಮನ ಇರಲಿದ್ದು, 4 ಲಿಫ್ಟ್ ಹಾಗೂ 4 ಕಡೆ ಮೆಟ್ಟಿಲುಗಳನ್ನು ನಿರ್ಮಿಸಲಾಗುವುದು. ಸಬ್‍ವೇ ಸಂಪರ್ಕ ವ್ಯವಸ್ಥೆ ಕೂಡ ಮಾಡಲಾಗುವುದು.
ಎಕ್ಸ್‌ಪ್ರೆಸ್, ಗ್ರಾಮೀಣ ಸಾರಿಗೆ ಬಸ್:
ಮೊದಲ ಅಂತಸ್ತು ಎಕ್ಸ್‌ಪ್ರೆಸ್, ಗ್ರಾಮೀಣ ಸಾರಿಗೆ ಬಸ್ ನಿಲ್ದಾಣಕ್ಕೆ ಮೀಸಲಿರಿಸಲಾಗಿದೆ. 35 ಬಸ್ಸುಗಳು ಒಟ್ಟಿಗೆ ಬಂದು ನಿಲ್ಲುವ ವ್ಯವಸ್ಥೆ ಇರಲಿದೆ. ಜೊತೆಗೆ ಆಡಳಿತ ಕಚೇರಿ, ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಕುಡಿಯುವ ನೀರು, ಲಗ್ಗೇಜ್ ಕೊಠಡಿ ಸೇರಿದಂತೆ ಶೌಚಾಗೃಹ ಸೌಲಭ್ಯ, ಲಿಫ್ಟ್, ಎಸ್ಕಲೇಟರ್ ಸಹ ಪ್ರಯಾಣಿಕರಿಗಾಗಿ ನಿರ್ಮಿಸಲಾಗುತ್ತದೆ.
ಅಂಗಡಿ-ಮಳಿಗೆಗಳು:
2 ಹಾಗೂ 3ನೇ ಅಂತಸ್ತಿನಲ್ಲಿ ಮಾಲ್‍ಗಳು, ಖಾಸಗಿ ಕಚೇರಿ ಕಟ್ಟಡಗಳನ್ನು ನಿರ್ಮಿಸಲಾಗುವುದು. ಛಾವಣಿಯಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಿ 65 ಕೆವಿ ಸೌರ ವಿದ್ಯುತ್ ಉತ್ಪಾದನೆಗೆ ಅವಕಾಶ ನೀಡಲಾಗುತ್ತದೆ.
ಸಾರಿಗ್ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಪೂರ್ಣವಾಗುವವರೆಗೂ ಈಗಿರುವ ಬಸ್ ನಿಲ್ದಾಣವನ್ನು ಹತ್ತಿರದಲ್ಲಿರುವ ಜೆ.ಸಿ ರಸ್ತೆಯ ಖಾಸಗಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಕೆಎಸ್ಆರ್‌ಟಿಸಿ ಬಸ್ ಡಿಪೋ-1ಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಜ. 8ರಿಂದ ಈ ಬಸ್ ನಿಲ್ದಾಣ ಕಾರ್ಯಾರಂಭವಾಗಿದ್ದು, ಅಶೋಕ ರಸ್ತೆಯಿಂದ ಬಸವೇಶ್ವರ ರಸ್ತೆ ಮೂಲಕ ನಿಲ್ದಾಣ ಪ್ರವೇಶಿಸುವ ಬಸ್ಸುಗಳು ಗುಬ್ಬಿ ವೀರಣ್ಣ ಕಲಾಕ್ಷೇತ್ರ ಭಾಗದಲ್ಲಿ ನಿರ್ಗಮಿಸಲಿವೆ. 2 ನಿರ್ಗಮನ ದ್ವಾರಗಳಿರಲಿವೆ.