ತುಮಕೂರು: ಚಲಿಸುತ್ತಿದ್ದ ಬೈಕ್‍ಗೆ ಅಡ್ಡ ಬರುತ್ತಿದ್ದ ಜಿಂಕೆಯನ್ನು ರಕ್ಷಿಸಲು ಹೋಗಿ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಶಿರಾ ತಾಲೂಕಿನ ಕ್ಯಾದಿಗುಂಟೆ ಗ್ರಾಮದಲ್ಲಿ ನಡೆದಿದೆ.
ಬರಗೂರು ರಂಗಾಪುರ ಗ್ರಾಮದ ಶಿಕ್ಷಕ ರಾಜಣ್ಣ (54) ಮೃತ ದುರ್ದೈವಿ. ರಾಜಣ್ಣ ಅವರು ಭಾನುವಾರ ತಡರಾತ್ರಿ ಶಿರಾ ಪಟ್ಟಣದಿಂದ ಊರಿಗೆ ಹೋಗುತ್ತಿದ್ದಾಗ ದಾರಿ ಮಧ್ಯೆ ದುರ್ಘಟನೆ ಸಂಭವಿಸಿದೆ. ರಾಜಣ್ಣ ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಅವರ ಸಾವಿನ ಸುದ್ದಿ ಕೇಳಿ ಹಿತೈಷಿಗಳು, ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ.
ಘಟನೆ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಯಾದಿಗುಂಟೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಜಿಂಕೆಗಳು ಹೆಚ್ಚಾಗಿದ್ದು, ರಾತ್ರಿ ವೇಳೆ ರಸ್ತೆ ಗಿಳಿಯುತ್ತವೆ. ಹಾಗಾಗಿ ಇಂಥಹ ಅಪಘಾತಗಳು ನಡೆಯುತ್ತಿವೆ. ಅರಣ್ಯ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.