ತುಮಕೂರು: ಸೂರ್ಯ ಗ್ರಹಣದಂದೇ ದೇವಾಲಯದ ಅರ್ಚಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿಯಲ್ಲಿ ನಡೆದಿದೆ.
ತಾಲೂಕಿನ ಪ್ರಮುಖ ದೇವಾಲಯಗಳಲ್ಲಿ ಒಂದಾಗಿರೋ ಹೊನವಳ್ಳಿ ಉಡಸಲಮ್ಮ ದೇವಾಲಯದ ಪೂಜಾರಿ ಕೆಂಪರಾಜು (29) ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಮನೆಯ ರೂಮಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ತಿಂಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಇವರ ಬಳಿ ಭವಿಷ್ಯ ಕೇಳಿ ಹೋಗಿದ್ದರು. ಅರ್ಚಕರ ಸಾವಿನ ವಿಷಯ ತಿಳಿದು ಸುತ್ತಮುತ್ತಲಿನ ನೂರಾರು ಮಂದಿ ಗ್ರಾಮಸ್ಥರು ಮನೆ ಮುಂದೆ ಜಮಾಯಿಸಿದ್ದಾರೆ. ದೇವಿಯ ಅರ್ಚಕರೇ ಸೂರ್ಯ ಗ್ರಹಣದ ದಿನವೇ ಅನುಮಾನಾಸ್ಪದವಾಗಿ ಮೃತಪಟ್ಟಿರೋದು ಸ್ಥಳೀಯರ ಆತಂಕ ಹೆಚ್ಚಿಸಿದೆ.
ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಮೃತರಿಗೆ ಪತ್ನಿ, ಹೆಣ್ಣು ಮಗುವಿದೆ. ಘಟನಾ ಸ್ಥಳಕ್ಕೆ ಹೊನವಳ್ಳಿ ಪೊಲೀಸ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.