ತುಮಕೂರು: ರಾಜ್ಯದ ಜನತೆಯ ಹಿತಾಸಕ್ತಿಯನ್ನು ಮರೆತು ಅಧಿಕಾರಕೋಸ್ಕರ ರೆಸಾರ್ಟ್ ರಾಜಕಾರಣ ಮಾಡುತ್ತಿರುವ ಜನಪ್ರತಿನಿಧಿಗಳ ವಿರುದ್ಧ ರೈತರು ಛೀ…ಥೂ.. ಚಳುವಳಿ ಕೈಗೊಂಡಿದ್ದಾರೆ.
ತುಮಕೂರು ಜಿಲ್ಲೆಯಾದ್ಯಂತ ರಾಜ್ಯ ರೈತ ಸಂಘದ ಕಾರ್ಯಕರ್ತರು ರೆಸಾರ್ಟ್ ರಾಜಕಾರಣ ಮಾಡುತಿರುವ ಜನಪ್ರತಿನಿಧಿಗಳ ಭಾವಚಿತ್ರಕ್ಕೆ ಎಲೆ ಅಡಿಕೆಯ ಎಂಜಲನ್ನು ಉಗಿದು ಛೀ…ಥೂ.. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಜಿಲ್ಲಾಧ್ಯಕ್ಷ ಆನಂದ ಹುಲಿಕಟ್ಟೆ ನೇತೃತ್ವದಲ್ಲಿ ನೂರಾರು ಜನ ರೈತರು ಸೇರಿ. ಜನಪ್ರತಿನಿಧಿಗಳ ಭಾವಚಿತ್ರಕ್ಕೆ ಎಂಜಲಿನ ಮಜ್ಜನ ಮಾಡಿಸಿ, ಚಪ್ಪಲಿ ಏಟು ಕೊಟ್ಟು ಪ್ರತಿಕೃತಿ ದಹಿಸಿದ್ದಾರೆ. ರಾಜ್ಯದ ಅಭಿವೃದ್ಧಿ ಮರೆತ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ನ 13 ಮಂದಿ ಶಾಸಕರು ರಾಜೀನಾಮೆ ನೀಡಿ ಮುಂಬೈ ಹೋಟೆಲ್ ನಲ್ಲಿ ತಂಗಿದ್ದಾರೆ. ಹೀಗಾಗಿ ಅವರ ಮನವೊಲಿಸುವ ಕಾರ್ಯವನ್ನು ಕೈಗೊಂಡು ದೋಸ್ತಿಗಳು ವಿಫಲರಾದರು. ಇತ್ತ ರಿವರ್ಸ್ ಆಪರೇಷನ್ ಭಯದಿಂದ ಬಿಜೆಪಿ ಶಾಸಕರು ರಮಡ ಮತ್ತು ಸಾಯಿಲೀಲಾ ರೆಸಾರ್ಟ್ ನಲ್ಲಿ ವಾಸ್ತವ್ಯ ಮಾಡಿದ್ದಾರೆ. ಜೆಡಿಎಸ್ ನವರು ಕೂಡ ಉಳಿದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ನಂದಿಬೆಟ್ಟದ ಬಳಿಯಿರೋ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಸೇರಿದ್ದರೆ, ಇತ್ತ ಕಾಂಗ್ರೆಸ್ ನಾಯಕರು ತಾಜ್ ವಿವಾಂತ ರೆಸಾರ್ಟಿನಲ್ಲಿದ್ದಾರೆ.