700 ವರ್ಷದ ಹಿಂದೆ ತುಘಲಕ್ ಸಹ ನೋಟ್ ಬ್ಯಾನ್ ಮಾಡಿದ್ದ: ಪ್ರಧಾನಿ ಮೋದಿಗೆ ಯಶವಂತ್ ಸಿನ್ಹಾ ಟಾಂಗ್

Public TV
2 Min Read
Yashwant Sinha modhi

ಅಹಮಾದಾಬಾದ್: 700 ವರ್ಷಗಳ ಹಿಂದೆ ರಾಜ ಮಹಮ್ಮದ್ ಬಿನ್ ತುಘಲಕ್ ಸಹ ಹಳೆಯ ಕರೆನ್ಸಿಗಳನ್ನು ಅಮಾನ್ಯಗೊಳಿಸಿದ್ದ ಎಂದು ಹೇಳುವ ಮೂಲಕ ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿಯವರ ನೋಟ್ ಬ್ಯಾನ್ ನಿಂದಾಗಿ ಭಾರತದ ಅರ್ಥ ವ್ಯವಸ್ಥೆಗೆ ಸುಮಾರು 3.75 ಲಕ್ಷ ಕೋಟಿ ರೂ. ನಷ್ಟವಾಗಿದೆ. ಈ ಹಿಂದೆ ರಾಜರ ಆಡಳಿತಾವಧಿಯಲ್ಲಿ ಹಲವು ಶೇನ್ ಶಾಗಳು ಕರೆನ್ಸಿಗಳನ್ನು ಅಮಾನ್ಯಗೊಳಿಸಿದ್ದರು. ಮಹಮ್ಮದ್ ಬಿನ್ ತುಘಲಕ್ ಚಾಲ್ತಿಯಲ್ಲಿದ್ದ ನಾಣ್ಯಗಳನ್ನು ರದ್ದುಗೊಳಿಸಿ, ಹೊಸ ನಾಣ್ಯಗಳನ್ನು ಚಲಾವಣೆಗೆ ತಂದಿದ್ದ ಎಂದು ಹೇಳಿದರು.

yashwant sinha

ಇದೇ ತುಘಲಕ್ ತನ್ನ ರಾಜಧಾನಿಯನ್ನು ದೆಹಲಿಯಿಂದ ದೌಲತಾಬಾದ್‍ಗೆ ವರ್ಗಾಯಿಸಿದ್ದ. ಮತ್ತೆ ರಾಜಧಾನಿಯನ್ನು ದೌಲತಾಬಾದ್ ನಿಂದ ಪುನಃ ದೆಹಲಿಗೆ ಸ್ಥಳಾಂತರಿಸಿ ಪ್ರಜೆಗಳ ಕೋಪಕ್ಕೆ ಕಾರಣನಾಗಿದ್ದನು.

ಪ್ರಜಾಪ್ರಭುತ್ವ ಉಳಿಸಿ ಆಂದೋಲನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿನ್ಹಾ, ದೇಶದ ಆರ್ಥಿಕ ಪರಿಸ್ಥಿತಿಯನ್ನು ಬದಲಾಯಿಸಲು ಇದು ಸೂಕ್ತ ಸಮಯವಾಗಿದೆ. ಆದರೆ ನೋಟ್ ಬ್ಯಾನ್ ನಿಂದಾಗಿ ದೇಶಕ್ಕೆ ಆರ್ಥಿಕ ಹೊರೆ ಉಂಟಾಗಿದೆ. ನೋಟು ನಿಷೇಧದ ಬಳಿಕ ಹೊಸ ನೋಟುಗಳ ಮುದ್ರಣಕ್ಕಾಗಿ 1,28,000 ಕೋಟಿ ರೂ. ವ್ಯಯವಾಗಿದೆ. ದೇಶದ ಅರ್ಥವ್ಯವಸ್ಥೆಯಲ್ಲಿ ಆರ್ಥಿಕ ಚಟುವಟಿಕೆಗಳು ನಿಧಾನಗೊಂಡಿದ್ದರಿಂದ ಅಂದಾಜು 2,25,000 ಕೋಟಿ ರೂ. ನಷ್ಟವಾಗಿದೆ. ಒಟ್ಟಾರೆಯಾಗಿ ದೇಶಕ್ಕೆ 3.75 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದರು.

ನೋಟ್ ಬ್ಯಾನ್ ಹಾಗೂ ಜಿಎಸ್‍ಟಿ ಪ್ರಕ್ರಿಯೆಗಳು ಮಾಧ್ಯಮ ಸಮಾರಂಭಗಳಾಗಿ ಬದಲಾಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದ ಕೆಲಸಗಳನ್ನು ಮರೆಯಬಾರದು. ಈ ಹಿಂದೆ ಈ ರೀತಿಯ ಕೆಲಸಗಳನ್ನು ಮಾಡದೇ ಇದ್ದರೆ ಅವರಿಗೆ ಭಾರತ ರತ್ನ ಗೌರವವನ್ನು ನಾವು ಕೊಟ್ಟಿದ್ದು ಯಾಕೆ ಎಂದು ಅವರು ಪ್ರಶ್ನಿಸಿದರು.

ಸಿನ್ಹಾ ಅವರು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ARUN JAITLY

ಯಶವಂತ್ ಸಿನ್ಹಾ ಅವರು ಮೋದಿ ಸೇರಿದಂತೆ ಪಕ್ಷದ ನಾಯಕರನ್ನು ಟೀಕಿಸುವುದು ಇದೆ ಮೊದಲಲ್ಲ. ಸೆಪ್ಟೆಂಬರ್ ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿಯಿಂದ ದೇಶದ ಅರ್ಥವ್ಯವಸ್ಥೆ ಹಾಳಾಗಿದೆ ಎಂದು ಟೀಕಿಸಿದ್ದರು. 2014ರ ಲೋಕಸಭಾ ಚುನಾವಣೆಗಾಗಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲಾದ ಬಳಿಕ ಹಿರಿಯ ಬಿಜೆಪಿ ನಾಯಕರಾದ ಎಲ್ ಕೆ ಆಡ್ವಾಣಿ, ಯಶವಂತ್ ಸಿನ್ಹಾ ಮತ್ತು ಮುರಳಿ ಮನೋಹರ ಜೋಷಿ ಅವರು ಪಕ್ಷದ ನಾಯಕತ್ವವನ್ನು ಹಲವು ಸಂದರ್ಭಗಳಲ್ಲಿ ಟೀಕಿಸಿದ್ದರು.

ತಮ್ಮ ಸಚಿವ ಸಂಪುಟ ಸೇರ್ಪಡೆಗೆ ಸಚಿವರ ಗರಿಷ್ಠ ವಯೋಮಿತಿಯನ್ನು 75ಕ್ಕೆ ಸೀಮಿತಗೊಳಿಸಿದ್ದಕ್ಕೆ ಯಶವಂತ್ ಸಿನ್ಹಾ, ಈಗಿನ ಸರ್ಕಾರ 75 ದಾಟಿದವರನ್ನು “ಬ್ರೇನ್ ಡೆಡ್ ಎಂದು ಡಿಕ್ಲೇರ್ ಮಾಡಿದೆ”ಎಂದು ಲೇವಡಿ ಮಾಡಿದ್ದರು.

ಯಶವಂತ್ ಸಿನ್ಹಾ ಸಹಿತ ಹಲವು ಹಿರಿಯ ಬಿಜೆಪಿ ನಾಯಕರನ್ನು ಮೂಲೆ ಗುಂಪು ಮಾಡಿ `ಮಾರ್ಗದರ್ಶಕ ಮಂಡಳಿ’ಯ ಸದಸ್ಯರನ್ನಾಗಿ ನೇಮಿಸಿದ್ದಾರೆ ಎನ್ನುವ ಆರೋಪ ಮೋದಿ ಮೇಲಿದೆ. ಸಿನ್ಹಾ ಅವರು ಮಾರ್ಗದರ್ಶಕ ಮಂಡಳಿಯನ್ನು ಆನೇಕ ಬಾರಿ ಲೇವಡಿ ಮಾಡಿ ಮಾತನಾಡಿದ್ದರು.

ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು 1 ವರ್ಷದ ಹಿಂದೆಯೇ ನಾನು ಸಮಯವನ್ನು ಕೇಳಿದ್ದೆ, ಆದರೆ ಇದೂವರೆಗೂ ನನಗೆ ಭೇಟಿಯಾಗಲು ಸಮಯವನ್ನು ನೀಡಿಲ್ಲ ಎಂದು ಯಶವಂತ್ ಸಿನ್ಹಾ ವಾಗ್ದಾಳಿ ನಡೆಸಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *