-ಸೆ.24ರಿಂದ ಅ.2ರವರೆಗೆ ತಿರುಮಲ ವಾರ್ಷಿಕ ಬ್ರಹ್ಮೋತ್ಸವ
– 2024ರಲ್ಲಿ ಕಾಲ್ತುಳಿತದ ಹಿನ್ನೆಲೆ ಈ ಬಾರಿ ಎಚ್ಚರವಹಿಸಲು ಸೂಚನೆ
ಬೆಂಗಳೂರು/ಹೈದರಾಬಾದ್/ಬೆಳಗಾವಿ: ಬೆಳಗಾವಿಯಲ್ಲಿ (Belagavi) ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಟಿಟಿಡಿ (TTD) ಆಡಳಿತ ಮಂಡಳಿ ಅನುಮೋದನೆ ನೀಡಿದೆ ಎಂದು ಟಿಟಿಡಿ ಸದಸ್ಯ ಎಸ್.ನರೇಶ್‌ಕುಮಾರ್ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಬೆಳಗಾವಿಯ ಕೋಳಿಕೊಪ್ಪದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಟಿಟಿಡಿ ಆಡಳಿತ ಮಂಡಳಿ ಅನುಮೋದನೆ ನೀಡಿದ್ದು, ಈ ಮೂಲಕ ಉತ್ತರ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯದ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿದೆ. ಇನ್ನೂ ಇದೇ ಸೆಪ್ಟೆಂಬರ್ 24ರಿಂದ ಅಕ್ಟೋಬರ್ 2ರವರೆಗೆ ತಿರುಮಲ ವಾರ್ಷಿಕ ಬ್ರಹ್ಮೋತ್ಸವ ನಡೆಯಲಿದ್ದು, ಸಕಲ ಸಿದ್ಧತೆ ನಡೆಯುತ್ತಿದೆ. ಕಳೆದ ಬಾರಿ ತಿರುಪತಿಯಲ್ಲಿ ಕಾಲ್ತುಳಿತ ಸಂಭವಿಸಿತ್ತು. ಹೀಗಾಗಿ ಈ ಬಾರಿ ಎಚ್ಚರ ವಹಿಸಲು ಸೂಚಿಸಲಾಗಿದೆ. ಬ್ರಹ್ಮೋತ್ಸವದ ಸಮಯದಲ್ಲಿ ವಿಶೇಷ ಗಮನಹರಿಸಲಿದ್ದು, ತಿರುಮಲದ ಪಾವಿತ್ರ‍್ಯತೆಯನ್ನು ಕಾಪಾಡುವುದು ಮತ್ತು ಸಾಮಾನ್ಯ ಭಕ್ತರಿಗೆ ಸುಲಭ ದರ್ಶನ ಸಿಗುವಂತೆ ಅವಕಾಶ ಮಾಡಿಕೊಡುತ್ತೇವೆ ಎಂದಿದ್ದಾರೆ.ಇದನ್ನೂ ಓದಿ: ಸೋಮವಾರದಿಂದಲೇ ನಂದಿನಿ ಉತ್ಪನ್ನಗಳ ದರ ಇಳಿಕೆ; ಯಾವುದಕ್ಕೆ ಎಷ್ಟು ದರ? – ಇಲ್ಲಿದೆ ಪಟ್ಟಿ
ಸೆಪ್ಟೆಂಬರ್ 28ರಂದು ಭಾನುವಾರ ಪ್ರಮುಖ ದಿನವಾಗಿದ್ದು, ಅಂದು ಅದ್ದೂರಿಯಾಗಿ ನಡೆಯುವ ಗರುಡ ಸೇವೆ ಭಕ್ತರ ಪ್ರಮುಖ ಆಕರ್ಷಣೆಯಾಗಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ದೇವರ ದರ್ಶನಕ್ಕೆ ಆಗಮಿಸಲಿದ್ದಾರೆ. ಹೀಗಾಗಿ ಬ್ರಹ್ಮೋತ್ಸವವನ್ನು ಸುಗಮವಾಗಿ ನಡೆಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಟಿಟಿಡಿಯ ಎಲ್ಲಾ ಇಲಾಖೆಗಳು ಸೂಕ್ಷ್ಮ ಮಟ್ಟದ ಯೋಜನೆಗಳನ್ನು ಸಿದ್ಧಪಡಿಸಿವೆ. ಭಕ್ತರಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ನೋಡಿಕೊಳ್ಳಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನೂ ಕಲ್ಯಾಣ ಕಟ್ಟೆಗೆ ಹೆಚ್ಚುವರಿಯಾಗಿ 1,500 ಜನರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ವಸತಿ ಸೌಕರ್ಯ: ಬ್ರಹ್ಮೋತ್ಸವದ ಒಂಬತ್ತು ದಿನಗಳಲ್ಲಿ ಶಿಫಾರಸು ಪತ್ರಗಳ ಮೂಲಕ ಕೊಠಡಿಗಳನ್ನು ರದ್ದುಪಡಿಸಲಾಗಿದೆ. ಈ ಅವಧಿಯಲ್ಲಿ 3,500 ಕೊಠಡಿಗಳನ್ನು ಆಫ್‌ಲೈನ್‌ನಲ್ಲಿ ಹಂಚಿಕೆ ಮಾಡಲಾಗುವುದು, ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ದರ್ಶನ ವ್ಯವಸ್ಥೆ: ವಾಹನ ಸೇವೆಗಳನ್ನು ವೀಕ್ಷಿಸಲು ಭಕ್ತರಿಗಾಗಿ 36 ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುವುದು. ಗರುಡ ಸೇವೆಯ ದಿನವನ್ನು ಹೊರತುಪಡಿಸಿ ಪ್ರತಿದಿನ 1.16 ಲಕ್ಷ ವಿಶೇಷ ದರ್ಶನ ಟಿಕೆಟ್‌ಗಳು ಮತ್ತು 25,000 ಎಸ್.ಎಸ್.ಡಿ. ಟೋಕನ್‌ಗಳನ್ನು ವಿತರಿಸಲಾಗುವುದು. ವಿಐಪಿ ಬ್ರೇಕ್ ದರ್ಶನವನ್ನು ಸ್ವತಃ ಹಾಜರಾಗುವ ವಿಐಪಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಉಳಿದ ಎಲ್ಲಾ ಸವಲತ್ತು ದರ್ಶನಗಳನ್ನು ರದ್ದುಗೊಳಿಸಲಾಗಿದೆ.ಇದನ್ನೂ ಓದಿ: ನಾಳೆ ಮಹಾಲಯ ಅಮಾವಾಸ್ಯೆ ಸೂರ್ಯಗ್ರಹಣ; ಯಾವೆಲ್ಲ ರಾಶಿಗಳಿಗೆ ಶುಭ-ಅಶುಭ?
ಲಡ್ಡುಗಳ ದಾಸ್ತಾನು: ಪ್ರತಿದಿನ 8 ಲಕ್ಷ ಲಡ್ಡುಗಳನ್ನು ಸಿದ್ಧವಾಗಿ ಇರಿಸಿಕೊಳ್ಳಲಾಗುವುದು.
ಸಹಾಯ ಕೇಂದ್ರಗಳು: ಭಕ್ತರಿಗೆ ಮಾಹಿತಿ ನೀಡಲು 20 ಸಹಾಯ ಕೇಂದ್ರಗಳನ್ನು (ಹತ್ತು ಹೆಚ್ಚುವರಿ) ತೆರೆಯಲಾಗಿದೆ.
ಅನ್ನಪ್ರಸಾದಂ: ಗರುಡ ಸೇವೆ ದಿನದಂದು ಗ್ಯಾಲರಿಗಳಲ್ಲಿರುವ ಭಕ್ತರಿಗೆ 14 ಬಗೆಯ ತಿಂಡಿ-ತಿನಿಸುಗಳನ್ನು ವಿತರಿಸಲಾಗುವುದು. ಅನ್ನಪ್ರಸಾದಂ ಕಾಂಪ್ಲೆಕ್ಸ್ನಲ್ಲಿ ಪ್ರತಿದಿನ ಬೆಳಿಗ್ಗೆ 8 ರಿಂದ ರಾತ್ರಿ 11ರವರೆಗೆ ಅನ್ನಪ್ರಸಾದ ಸೇವೆ ಇರುತ್ತದೆ.
ಪಾರ್ಕಿಂಗ್ ಸೌಲಭ್ಯ: ತಿರುಮಲದಲ್ಲಿ ಸುಮಾರು 4,000 ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇದೆ. ತಿರುಪತಿಯಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳಿಗಾಗಿ ಒಟ್ಟು 5,250 ಮತ್ತು 2,700 ಪಾರ್ಕಿಂಗ್ ಸ್ಥಳಗಳು ಲಭ್ಯವಿದೆ.
ಆರ್.ಟಿ.ಸಿ ಬಸ್ ಸೇವೆ: ತಿರುಪತಿಯ ವಿವಿಧ ಪಾರ್ಕಿಂಗ್ ಸ್ಥಳಗಳಿಂದ ತಿರುಮಲಕ್ಕೆ ಭಕ್ತರನ್ನು ಕರೆದೊಯ್ಯಲು ಆರ್.ಟಿ.ಸಿ. ಬಸ್ಸುಗಳು ಲಭ್ಯವಿರುತ್ತವೆ. ಇತರ ದಿನಗಳಲ್ಲಿ 1,900 ಟ್ರಿಪ್‌ಗಳು ಮತ್ತು ಗರುಡ ಸೇವೆ ದಿನದಂದು 3,200 ಟ್ರಿಪ್‌ಗಳು ಇರುತ್ತವೆ.
ಭದ್ರತಾ ವ್ಯವಸ್ಥೆ: 2,000 ಟಿಟಿಡಿ ಭದ್ರತಾ ಸಿಬ್ಬಂದಿ, 4,700 ಪೊಲೀಸ್ ಸಿಬ್ಬಂದಿ, 3,500 ಶ್ರೀವಾರಿ ಸೇವಕರು ಮತ್ತು 450 ಟಿಟಿಡಿ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 3,000 ಸಿಸಿಟಿವಿ ಕ್ಯಾಮೆರಾಗಳನ್ನು ಕಮಾಂಡ್ ಕಂಟ್ರೋಲ್ ರೂಮ್‌ಗೆ ಸಂಪರ್ಕಿಸಲಾಗಿದೆ.
ಇತರ ಸಿಬ್ಬಂದಿ: ಬ್ರಹ್ಮೋತ್ಸವಕ್ಕಾಗಿ 2,300 ನೈರ್ಮಲ್ಯ ಸಿಬ್ಬಂದಿ ಜೊತೆಗೆ ಹೆಚ್ಚುವರಿಯಾಗಿ 960 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 1,150 ಕೇಶಮುಂಡನ ಸಿಬ್ಬಂದಿಗಳು ಸೇವೆ ಸಲ್ಲಿಸಲಿದ್ದಾರೆ.
ಆರೋಗ್ಯ ಸೇವೆ: 50 ವೈದ್ಯರು ಮತ್ತು 60 ಅರೆವೈದ್ಯಕೀಯ ಸಿಬ್ಬಂದಿ ಹಾಗೂ ಡಜನ್‌ಗಿಂತಲೂ ಹೆಚ್ಚು ಆಂಬ್ಯುಲೆನ್ಸ್ ಸೇವೆಗಳು ಲಭ್ಯವಿರುತ್ತವೆ ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ನವರಾತ್ರಿಯಿಂದಲೇ ಹೊಸ GST ದರ ಜಾರಿ; ಯಾವ ವಸ್ತುಗಳು ಅಗ್ಗ, ಯಾವುದು ದುಬಾರಿ? – ಇಲ್ಲಿದೆ ಪೂರ್ಣ ಪಟ್ಟಿ