ಊಟಕ್ಕೆ ಯಾವಾಗಲೂ ಉಪ್ಪಿನಕಾಯಿ ಇಲ್ಲ ಎಂದರೆ ಏನೋ ಮಿಸ್ ಅಂತ ಹೆಚ್ಚಿನವರಿಗೆ ಎನಿಸುತ್ತದೆ. ಮಾವಿನಕಾಯಿ ಉಪ್ಪಿನಕಾಯಿ, ನಿಂಬೆ ಹಣ್ಣಿನ ಉಪ್ಪಿನಕಾಯಿ ಎಲ್ಲರಿಗೂ ಗೊತ್ತು. ಆದರೆ ಕಾಬೂಲ್ ಕಡಲೆಯ ಉಪ್ಪಿನಕಾಯಿಯನ್ನು ನೀವು ಎಂದಾದ್ರೂ ಸವಿದಿದ್ದೀರಾ? ಇಲ್ಲ ಎಂದರೆ ಈ ಒಂದು ರೆಸಿಪಿಯನ್ನು ನೀವು ಖಂಡಿತವಾಗ್ಲೂ ಟ್ರೈ ಮಾಡ್ಬೇಕು. ಇಲ್ಲಿಯವರೆಗೆ ಕಾಬೂಲ್ ಕಡಲೆಯನ್ನು ಉಸ್ಲಿ, ಗ್ರೇವಿ ಅಥವಾ ಸಾರಿನಲ್ಲಿ ಮಾತ್ರ ಸವಿದಿದ್ದರೆ ಈ ರೀತಿಯೂ ಒಮ್ಮೆ ಉಪ್ಪಿನಕಾಯಿಯ ರುಚಿಯಲ್ಲಿ ಆಸ್ವಾದಿಸಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಕಾಬೂಲ್ ಕಡಲೆ – 150 ಗ್ರಾಂ
ಮಾವಿನಕಾಯಿ – 600 ಗ್ರಾಂ
ವಿನೆಗರ್ – 2 ಕಪ್
ಅರಿಶಿನ ಪುಡಿ – 1 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 2 ಟೀಸ್ಪೂನ್
ಜೀರಿಗೆ ಪುಡಿ – 5 ಟೀಸ್ಪೂನ್
ಮೆಂತ್ಯ ಬೀಜದ ಪುಡಿ – 1 ಟೀಸ್ಪೂನ್
ಸಾಸಿವೆ ಪುಡಿ – 1 ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ಎಣ್ಣೆ – 2 ಕಪ್ ಇದನ್ನೂ ಓದಿ: ಈ ರೀತಿ ಮಾಡಿ ಕ್ರಿಸ್ಪಿ ಮೆಂತ್ಯ ವಡಾ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಕಾಬೂಲ್ ಕಡಲೆಯನ್ನು ಒಂದು ದೊಡ್ಡ ಬಟ್ಟಲಿನಲ್ಲಿ ಹಾಕಿ ಸಾಕಷ್ಟು ನೀರು ಸೇರಿಸಿ ಕನಿಷ್ಠ 10 ಗಂಟೆಗಳ ಕಾಲ ನೆನೆಸಿಡಿ.
* ಬಳಿಕ ನೀರನ್ನು ಹರಿಸಿ, ಒಂದು ಶುಭ್ರ ಬಟ್ಟೆ ತೆಗೆದುಕೊಂಡು ಕಡಲೆ ಒಣಗುವಂತೆ ಒರೆಸಿಕೊಳ್ಳಿ.
* ಒಂದು ದೊಡ್ಡ ಬಟ್ಟಲಿನಲ್ಲಿ ವಿನೆಗರ್ ಹಾಕಿ ಅದರಲ್ಲಿ ಕಡಲೆಗಳನ್ನು ಕನಿಷ್ಠ 10 ಗಂಟೆಗಳ ಕಾಲ ನೆನೆಸಿಡಿ.
* ಈ ನಡುವೆ ಒಂದು ಬಾಣಲೆ ತೆಗೆದುಕೊಂಡು ಅದರಲ್ಲಿ ಎಣ್ಣೆ ಬಿಸಿ ಮಾಡಿ. ಎಣ್ಣೆಯಿಂದ ಹೊಗೆ ಹೊರಬರಲು ಪ್ರಾರಂಭಿಸಿದಾಗ ಉರಿಯನ್ನು ಆಫ್ ಮಾಡಿ ಆರಲು ಪಕ್ಕಕ್ಕಿಡಿ.
* ಈಗ ನೆನೆಸಿಟ್ಟಿದ್ದ ಕಡಲೆಯಿಂದ ವಿನೆಗರ್ ಅನ್ನು ಹರಿಸಿ.
* ಮಾವಿನಕಾಯಿಯ ಸಿಪ್ಪೆ ತೆಗೆದು, ಅದನ್ನು ತುರಿದುಕೊಳ್ಳಿ ಹಾಗೂ ಅದನ್ನು ಕಡಲೆಗೆ ಸೇರಿಸಿ.
* ಈಗ ಅದಕ್ಕೆ ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಮೆಂತ್ಯ ಬೀಜದ ಪುಡಿ, ಸಾಸಿವೆ ಪುಡಿ ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿ.
* ಈಗ ಬಿಸಿ ಮಾಡಿ ತಣ್ಣಗಾಗಿಸಿದ ಎಣ್ಣೆಯಲ್ಲಿ ಸುಮಾರು 5 ಟೀಸ್ಪೂನ್‌ನಷ್ಟು ಎಣ್ಣೆಯನ್ನು ಉಪ್ಪಿನಕಾಯಿ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿ.
* ಈಗ ಮಿಶ್ರಣವನ್ನು ಒಂದು ಗಾಜಿನ ಪಾತ್ರೆಯಲ್ಲಿ ಹಾಕಿ, ಉಳಿದ ಎಣ್ಣೆಯನ್ನು ಅದಕ್ಕೆ ಸೇರಿಸಿ, ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿ.
* ಈಗ ಗಾಜಿನ ಡಬ್ಬಿಯನ್ನು ಸುಮಾರು 15 ದಿನಗಳ ವರೆಗೆ ಬಿಸಿಲಿನಲ್ಲಿಡಿ.
* 15 ದಿನಗಳ ಬಳಿ ಕಾಬೂಲ್ ಕಡಲೆಯ ಉಪ್ಪಿನಕಾಯಿ ಸವಿಯಲು ಸಿದ್ಧವಾಗುತ್ತದೆ. ಇದನ್ನು ನೀವು 1-2 ವರ್ಷಗಳ ವರೆಗೂ ಸಂಗ್ರಹಿಸಿ ಇಡಬಹುದು. ಇದನ್ನೂ ಓದಿ: ಸಿಂಪಲ್ಲಾಗಿ ಮಾಡಿ ಮಶ್ರೂಮ್ 65..