ಮೈಸೂರು: ಕಾಲೇಜ್ ಟ್ರಸ್ಟಿಗಳ ನಡುವಿನ ಜಾಗದ ವಿವಾದದಲ್ಲಿ ವಿದ್ಯಾರ್ಥಿಗಳನ್ನು ಕಾಲೇಜು ಒಳಗೆ ಕೂಡಿ ಹಾಕಿ ಗಲಾಟೆ ಮಾಡಿರುವ ಘಟನೆ ಮೈಸೂರಿನ ವಿಜಯನಗರದ ರೇಣುಕಾ ಪಿಯು ಕಾಲೇಜಿನಲ್ಲಿ ನಡೆದಿದೆ.
ಆಕೃತಿ ಎಜುಕೇಶನ್ ಟ್ರಸ್ಟ್ ಹೆಸರಿನಲ್ಲಿ 5 ಜನ ಟ್ರಸ್ಟಿಗಳು ಕಾಲೇಜ್ ನಡೆಸುತ್ತಿದ್ದರು. ಹಣ ದುರುಪಯೋಗದ ವಿಚಾರದಲ್ಲಿ ಇಬ್ಬರು ಟ್ರಸ್ಟಿಗಳನ್ನು ಟ್ರಸ್ಟ್‍ನಿಂದ ವಜಾ ಮಾಡಲಾಗಿತ್ತು. ಟ್ರಸ್ಟ್ ನಿಂದ ವಜಾ ಮಾಡಿದ್ದಕ್ಕೆ ರೇಣುಕಾ ಎಂಬವರು ಆಕ್ರೋಶಗೊಂಡಿದ್ದಾರೆ. ಇವರು ಕಾಲೇಜು ಜಾಗದ ಲೀಸ್ ಅನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರದ್ದು ಮಾಡಿ, ಅದೇ ಜಾಗವನ್ನು ಬೇರೆ ಟ್ರಸ್ಟ್‍ಗೆ ವರ್ಗಾವಣೆ ಮಾಡಿದ್ದರು.
ಇದರಿಂದಾಗಿ ಹೊಸದಾಗಿ ಲೀಸ್ ಪಡೆದವರು ನಿತ್ಯ ಕಾಲೇಜು ಬಳಿ ಬಂದು ಗಲಾಟೆ ನಡೆಸುತ್ತಿದ್ದರು. ಇಂದು ಗಲಾಟೆ ಮಿತಿ ಮೀರಿ ಕಾಲೇಜು ವಿದ್ಯಾರ್ಥಿಗಳನ್ನು ಒಳಗೆ ಸೇರಿಸಿ ಬೀಗ ಹಾಕಿದ್ದಾರೆ. ಜೊತೆಗೆ ಕಾಲೇಜಿನ ಗೇಟ್ ಮುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ.
ನಂತರ ವಿಷಯ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸಿದ್ದಾರೆ. ಸ್ಥಳಕ್ಕೆ ಡಿಡಿಪಿಯು ಶ್ರೀನಿವಾಸ್ ಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.