– ಪೀಠದಿಂದಲೇ ಕೆಳಗಿಳಿಸುವ ಎಚ್ಚರಿಕೆ ನೀಡಿದ ಟ್ರಸ್ಟ್
ಹುಬ್ಬಳ್ಳಿ: ಶಾಸಕ ಯತ್ನಾಳ್ (Basangouda Patil Yatnal) ಪರ ನಿಂತ ಜಯಮೃತ್ಯುಜಂಯ ಸ್ವಾಮೀಜಿಯವರ (Jaya Mruthyunjaya Swamiji) ಮಠದ ಟ್ರಸ್ಟ್‌ನಲ್ಲಿ ಬಿರುಕು ಉಂಟಾಗಿದೆ. ಪೀಠದಿಂದಲೇ ಕೆಳಗಿಳಿಸುವ ಎಚ್ಚರಿಕೆಯನ್ನು ಟ್ರಸ್ಟ್ ನೀಡಿದೆ. ಇದರಿಂದ ಸ್ವಾಮೀಜಿ ಪೀಠ ಕಳೆದುಕೊಳ್ಳುತ್ತಾರಾ? ಇಲ್ಲವೇ ಟ್ರಸ್ಟ್ ಎಚ್ಚರಿಕೆಗೆ ಸೆಡ್ಡು ಹೊಡೆದು ನಿಲ್ಲುತ್ತಾರಾ? ಅಥವಾ ಟ್ರಸ್ಟ್‌ನ ಕ್ಷಮೆ ಕೇಳಿ ಪೀಠ ಉಳಿಸಿಕೊಳ್ಳುತ್ತಾರಾ? ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ.
ಬಿಜೆಪಿಯಿಂದ (BJP) ಉಚ್ಚಾಟನೆಗೊಂಡರೂ ಬಾಯಿಗೆ ಬೀಗ ಹಾಕದ ಯತ್ನಾಳ್ ನಿತ್ಯ ಬಿಎಸ್‍ವೈ (B.S Yediyurappa) ಕುಟುಂಬವನ್ನು ಬೈಯುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ವಿಜಯದಶಮಿ ಬಳಿಕ ಹೊಸ ಪಕ್ಷ ಕಟ್ಟುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಒಂದು ಕಡೆ ಬಿಜೆಪಿ ಅವರನ್ನು ಕೈ ಬಿಟ್ಟಿದೆ. ಮತ್ತೊಂದು ಕಡೆ ಇಷ್ಟು ದಿನ ಜೊತೆಗಿದ್ದ ರಾಜಕೀಯ ಸ್ನೇಹಿತರು, ಕಾರ್ಯಕರ್ತರು ಸಹ ಯತ್ನಾಳ್ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಇಂತಹ ಸಮಯದಲ್ಲಿ ಅವರ ಜೊತೆಗೆ ಕೈ ಜೋಡಿಸಿರುವ ಪಂಚಮಸಾಲಿ ಕೂಡಲ ಸಂಗಮ ಪೀಠದ ಜಯಮೃತ್ಯುಂಜಯ ಶ್ರೀಗಳ ವಿರುದ್ಧ ಅಪಸ್ವರ ಎದ್ದಿದೆ. ಇದನ್ನೂ ಓದಿ: ತಹವ್ವೂರ್ ರಾಣಾ ಹಸ್ತಾಂತರವು ಮುಂಬೈ ದಾಳಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ದೊಡ್ಡ ಹೆಜ್ಜೆ : ಜೈಶಂಕರ್
ಉಚ್ಚಾಟನೆ ದಿನದಂದಲೂ ಶ್ರೀಗಳು ಯತ್ನಾಳ್ ಪರ ಬೆಂಬಲಕ್ಕೆ ನಿಂತಿದ್ದರು. ಪಂಚಮಸಾಲಿಗಳ ಬೆಂಬಲ ಬಿಜೆಪಿಗೆ ಬೇಕು ಅಂದರೆ ಯತ್ನಾಳ್ ಉಚ್ಚಾಟನೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದರು. ಇದೇ ಈಗ ಶ್ರೀಗಳ ಸ್ಥಾನಕ್ಕೆಯೇ ಕುತ್ತು ತಂದಿದೆ.
ಇಷ್ಟು ದಿನ ಪಂಚಮಸಾಲಿಗಳ 2ಎ ಮೀಸಲಾತಿ ಹೋರಾಟದಲ್ಲಿ ನಿರತರಾಗಿದ್ದ ಶ್ರೀಗಳು ಯತ್ನಾಳ್ ಪರ ಹೋರಾಟಕ್ಕಿಳಿದಿರುವುದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಕೆಂಗಣ್ಣಿಗೆ ಗುರಿಯಾಗಿದೆ. ಯಾಕೆಂದರೆ ಈ ಹಿಂದೆ ಅವರು ಟ್ರಸ್ಟ್ ವಿರುದ್ಧ ಗಂಭೀರವಾದ ಆರೋಪಗಳನ್ನು ಮಾಡಿದ್ದರು. ಟ್ರಸ್ಟ್ ರಾಷ್ಟ್ರೀಯ ಅಧ್ಯಕ್ಷ ಪ್ರಭಣ್ಣ ಪೀಠದ ಆಸ್ತಿ ಕಬಳಿಸಿದ್ದಾರೆ. ಇವರೆಲ್ಲ ಬಿಎಸ್‍ವೈ ಚೇಲಾಗಳು ಅಂತೆಲ್ಲ ಪಂಚಮಸಾಲಿ ಟ್ರಸ್ಟ್ ಪದಾಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದರು. ಇದು ಟ್ರಸ್ಟ್ ಅಸಮಾಧಾನಕ್ಕೆ ಕಾರಣವಾಗಿದೆ.
ಯತ್ನಾಳ್ ಉಚ್ಚಾಟನೆ ಬಿಜೆಪಿ ಪಕ್ಷದ ವಿಚಾರ, ಶ್ರೀಗಳು ಸಮಾಜದ ಪರವಾಗಿರಬೇಕೆ ಹೊರತು, ವ್ಯಕ್ತಿ ಪರವಾಗಿ ಅಲ್ಲ. ಇಲ್ಲದಿದ್ದರೆ ಪೀಠದಿಂದ ಕೇಳಗಿಳಿಸಬೇಕಾಗುತ್ತದೆ ಎಂದು ಟ್ರಸ್ಟ್‌ನ ಧರ್ಮದರ್ಶಿ ಮೋಹನ ಲಿಂಬಿಕಾಯಿ ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯಲ್ಲಿನ ಅಸಮಾಧಾನ ಪಂಚಮಸಾಲಿ ಸಮಾಜದಲ್ಲಿ ಬಿರುಗಾಳಿ ಎಬ್ಬಿಸಿದೆ. ಇದು ಮತ್ಯಾವ ತಿರುವು ಪಡೆದುಕೊಳ್ಳಲಿದೆಯೋ ಕಾದು ನೋಡಬೇಕಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳ| ಹಿಂಸಾಚಾರಕ್ಕೆ ತಿರುಗಿದ ವಕ್ಫ್ ಪ್ರತಿಭಟನೆ – ವಾಹನಗಳಿಗೆ ಬೆಂಕಿ, ರೈಲುಗಳ ಮೇಲೆ ಕಲ್ಲು