ಚಪ್ಪಲಿ, ಶೂ ತೆಗೆದು ಗಾಂಧಿ ಆಶ್ರಮದಲ್ಲಿ ಚರಕವನ್ನು ಸುತ್ತಿ ಸಂಭ್ರಮಿಸಿದ ಟ್ರಂಪ್ ದಂಪತಿ

Public TV
1 Min Read
modi tump main

ಅಹಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಮೆಲಾನಿಯಾ ಮಹಾತ್ಮ ಗಾಂಧೀಜಿಯವರ ಸಬರಮತಿ ಆಶ್ರಮದಲ್ಲಿ ಚರಕವನ್ನು ಸುತ್ತಿ ಸಂಭ್ರಮಿಸಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಹೊರಟ ಟ್ರಂಪ್ ದಂಪತಿಯನ್ನು ಜನ ರಸ್ತೆಯಲ್ಲಿ ನಿಂತು ಸ್ವಾಗತಿಸಿದರು. 22 ಕಿ.ಮೀ ರೋಡ್ ಶೋ ಮುಗಿಸಿದ ಬಳಿಕ ಟ್ರಂಪ್ ಅವರಿದ್ದ ಕಾರು ಮಧ್ಯಾಹ್ನ 12.20ಕ್ಕೆ ಸಬರಮತಿ ಆಶ್ರಮಕ್ಕೆ ತಲುಪಿತು.

 

ಟ್ರಂಪ್ ಕಾರು ಆಗಮಿಸುವ ಮೊದಲೇ ಪ್ರಧಾನಿ ಮೋದಿ ಸಬರಮತಿ ಆಶ್ರಮ ತಲುಪಿದ್ದರು. ಟ್ರಂಪ್ ದಂಪತಿ ಕಾರಿನಿಂದ ಇಳಿದ ಕೂಡಲೇ ಮೋದಿ ಶಾಲು ರೂಪದಲ್ಲಿರುವ ಖಾದಿ ಬಟ್ಟೆಯನ್ನು ಟ್ರಂಪ್ ದಂಪತಿಯ ಕುತ್ತಿಗೆಗೆ ಹಾಕಿ ಸ್ವಾಗತಿಸಿದರು.

ವಿಶೇಷ ಏನೆಂದರೆ ಮೆಲಾನಿಯಾ ಟ್ರಂಪ್ ತಮ್ಮ ಹೈ ಹೀಲ್ಸ್ ಚಪ್ಪಲಿಯನ್ನು ಮತ್ತು ಡೊನಾಲ್ಡ್ ಟ್ರಂಪ್ ಶೂ ಹೊರಗಡೆ ಇರಿಸಿ ಸಬರಮತಿ ಆಶ್ರಮವನ್ನು ಪ್ರವೇಶಿಸಿದರು. ಸಬರಮತಿ ಆಶ್ರಮ ಪ್ರವೇಶಿಸುತ್ತಿದ್ದಂತೆ ಗಾಂಧೀಜಿಯ ಭಾವಚಿತ್ರಕ್ಕೆ ಮೋದಿ ಮತ್ತು ಟ್ರಂಪ್ ಹಾರವನ್ನು ಹಾಕಿ ನಮಿಸಿದರು. ಈ ಸಂದರ್ಭದಲ್ಲಿ ಟ್ರಂಪ್ ಅವರಿಗೆ ಮೋದಿ ಸಬರಮತಿ ಆಶ್ರಮದ ಬಗ್ಗೆ ವಿವರಣೆ ನೀಡುತ್ತಿದ್ದರು. ಭೇಟಿ ಸಂದರ್ಭದಲ್ಲಿ ಗಾಂಧೀಜಿಯವರ ಪ್ರಸಿದ್ಧ ರಘುಪತಿ ರಾಘವ ರಾಜರಾಂ ಭಜನೆ ಹಾಡು ಹಿಂದುಗಡೆಯಿಂದ ಮೊಳಗುತಿತ್ತು.

 

ಇದಾದ ಬಳಿಕ ಹೊರಗಡೆ ಬಂದ ದಂಪತಿಗೆ ಮೋದಿ ಗಾಂಧೀಜಿ ಬಳಸುತ್ತಿದ್ದ ಚರಕವನ್ನು ತೋರಿಸಿದರು. ನಂತರ ಟ್ರಂಪ್ ದಂಪತಿ ಚರಕವನ್ನು ಸುತ್ತಿ ಆನಂದಿಸಿದರು. ಚರಕ ಸುತ್ತಿದ ಬಳಿಕ ಮೂವರು ಆಶ್ರಮದ ಹೊರಗಿನ ಆವರಣದಲ್ಲಿ ಕೆಲ ನಿಮಿಷಗಳ ಕಾಲ ಕುಳಿತುಕೊಂಡರು. ಕೊನೆಗೆ ಟ್ರಂಪ್ ಅತಿಥಿಗಳ ಪುಸ್ತಕದಲ್ಲಿ ಹಸ್ತಾಕ್ಷರ ಹಾಕಿದರು. “ಪ್ರೈಮ್ ಮಿನಿಸ್ಟರ್ ಮೋದಿ, ಥಾಂಕ್ಯೂ ಫಾರ್ ದಿಸ್ ವಂಡರ್ ಫುಲ್ ವಿಸಿಟ್” ಎಂಬುದಾಗಿ ಟ್ರಂಪ್ ಹಸ್ತಾಕ್ಷರ ಹಾಕಿ ನಂತರ ಕಾರಿನ ಮೂಲಕ ಅಹಮದಾಬಾದ್ ಕಡೆಗೆ ತೆರಳಿದರು.

Share This Article
Leave a Comment

Leave a Reply

Your email address will not be published. Required fields are marked *