ವಾಷಿಂಗ್ಟನ್: ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ವಿಶ್ವಸಂಸ್ಥೆಯ (Unaited Nations) 31 ಸೇರಿ 66 ಸಂಸ್ಥೆಗಳಿಂದ ಹೊರಬರಲು ಅಮೆರಿಕ ನಿರ್ಧರಿಸಿದೆ. ಈ ಕುರಿತ ಮಸೂದೆಗೆ ಟ್ರಂಪ್ (Donald Trump) ಸಹಿ ಹಾಕಿದ್ದಾರೆ ಎಂದು ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದೆ.
ಹೌದು. ಪ್ರಮುಖ ಹವಾಮಾನ ಒಪ್ಪಂದ, ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣ ಪ್ರಚಾರ ಮಾಡುವ ಸಂಸ್ಥೆ ಸೇರಿ ವಿಶ್ವಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಹಲವು ಸಂಘಟನೆ (International Organisations) / ಒಪ್ಪಂದಗಳಿಂದ ಹೊರ ನಡೆಯುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಇದರಲ್ಲಿ ವಿಶ್ವಸಂಸ್ಥೆಯ 31 ಹಾಗೂ ಇತರೇ 35 ಸೇರಿ ಒಟ್ಟು 66 ಸಂಘಟನೆಗಳು ಸೇರಿವೆ. ಇದನ್ನೂ ಓದಿ: 10 ಹೆಣ್ಣುಮಕ್ಕಳ ನಂತರ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ – ಮಕ್ಕಳ ಹೆಸ್ರು ಕೇಳಿದಾಗ ಹೆಣಗಾಡಿದ ತಂದೆ, ವಿಡಿಯೋ ವೈರಲ್
ಅಮೆರಿಕದ ತೆರಿಗೆದಾರರ ನಿಧಿ ಮತ್ತು ಅಮೆರಿಕದ ಆದ್ಯತೆಗಳ ಮೇಲೆ ಜಾಗತಿಕ ಕಾರ್ಯಸೂಚಿಗಳನ್ನು ಬೆಂಬಲಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಹಿರಿಯ ಆಡಳಿತ ಅಧಿಕಾರಿಗಳಿಗೆ ಸಲ್ಲಿಸಿದ ಟ್ರಂಪ್ ಜ್ಞಾಪಕ ಪತ್ರದಲ್ಲಿ ಪಟ್ಟಿ ಮಾಡಿರುವ 35 ವಿಶ್ವಸಂಸ್ಥೆಯೇತರ ಗುಂಪುಗಳು ಮತ್ತು 31 ವಿಶ್ವಸಂಸ್ಥೆಯ ಘಟಕಗಳಲ್ಲಿ ಹವಾಮಾನ ಬದಲಾವಣೆಯ ಕುರಿತಾದ ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶವೂ ಸೇರಿದೆ. ಇದು 2015ರ ಪ್ಯಾರಿಸ್ ಹವಾಮಾನ ಒಪ್ಪಂದದ ಭಾಗವಾಗಿದೆ. ಇದನ್ನೂ ಓದಿ: ನಾಯಿಯ ಮನಸ್ಸು ಓದಲು ಸಾಧ್ಯವಿಲ್ಲ – ಬೀದಿ ನಾಯಿಗಳ ಬಗ್ಗೆ ಸುಪ್ರೀಂ ಅಭಿಪ್ರಾಯ
ಕಳೆದ ವರ್ಷ ನಡೆದ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಹವಾಮಾನ ಸಮಾವೇಶಕ್ಕೆ ಅಮೆರಿಕ ಗೈರಾಗಿತ್ತು. ಅಮೆರಿಕ ಗೈರಾಗಿದ್ದು ಮೂರು ದಶಕದಲ್ಲಿ ಅದೇ ಮೊದಲು. ಮಹಿಳಾ ಸಬಲೀಕರಣಕ್ಕಾಗಿ ಇರುವ ‘ವಿಶ್ವಸಂಸ್ಥೆ-ಮಹಿಳೆ’ ಹಾಗೂ 150ಕ್ಕೂ ಹೆಚ್ಚು ದೇಶಗಳಲ್ಲಿ ಕುಟುಂಬ ಯೋಜನೆ, ತಾಯಿ ಮತ್ತು ಮಗುವಿನ ಆರೋಗ್ಯಕ್ಕಾಗಿ ಕೆಲಸ ಮಾಡುವ ವಿಶ್ವಸಂಸ್ಥೆ ಜನಸಂಖ್ಯೆ ನಿಧಿಯಿಂದ (ಯುಎನ್‌ಎಫ್‌ಪಿಎ) ಹೊರನಡೆದಿದೆ. ಕಳೆದ ವರ್ಷ ಇದಕ್ಕೆ ನೀಡುತ್ತಿದ್ದ ದೇಣಿಗೆಯನ್ನು ಅಮೆರಿಕ ಕಡಿತಗೊಳಿಸಿತ್ತು. ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಹೊರ ಬರುವುದಾಗಿ ಅಮೆರಿಕ ಟ್ರಂಪ್ ವರ್ಷದ ಹಿಂದೆಯೇ ಘೋಷಿಸಿದ್ದರು.
ತೀವ್ರಗಾಮಿ ಹವಾಮಾನ ನೀತಿಗಳು, ಜಾಗತಿಕ ಆಡಳಿತ ಮತ್ತು ಅಮೆರಿಕದ ಸಾರ್ವಭೌಮತ್ವ ಹಾಗೂ ಆರ್ಥಿಕ ಬಲಕ್ಕೆ ವಿರುದ್ಧವಾದ ಸೈದ್ಧಾಂತಿಕ ಕಾರ್ಯಕ್ರಮಗಳು ಒಳಗೊಂಡಿರುವುದರಿಂದ ಅವುಗಳಿಂದ ಹೊರನಡೆಯುವುದಾಗಿ ಶ್ವೇತಭವನ ಹೇಳಿದೆ. ಇದನ್ನೂ ಓದಿ: ಕ್ಯಾಬ್ ಬುಕ್ ಮಾಡಿ ಊರೆಲ್ಲಾ ಸುತ್ತಾಡಿದ ಮಹಿಳೆ – ಬಾಡಿಗೆ ಕೇಳಿದ್ರೆ ಲೈಂಗಿಕ ದೌರ್ಜನ್ಯ ಕೇಸ್ ಹಾಕ್ತೀನಿ ಅಂತಾ ಧಮ್ಕಿ



