ವಾಷಿಂಗ್ಟನ್: ವೆನೆಜುವೆಲಾ ಮತ್ತು ಇರಾನ್ ಬಳಿಕ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತೊಂದು ದೇಶದ ಮೇಲೆ ಕಣ್ಣಿಟ್ಟಿದ್ದಾರೆ. ಆ ದೇಶವನ್ನು ಆಕ್ರಮಿಸಿಕೊಳ್ಳುತ್ತೇನೆ ಅಥವಾ ಸ್ವತಂತ್ರಗೊಳಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹೌದು. ಕ್ಯೂಬಾ (Cuba) ದೇಶದ ಮೇಲೆ ಕಣ್ಣಿಟ್ಟಿರುವ ಟ್ರಂಪ್, ನಾನು ಆ ದೇಶವನ್ನ ವಶಪಡಿಸಿಕೊಳ್ಳುತ್ತೇನೆ ಅಥವಾ ಸ್ವತಂತ್ರಗೊಳಿಸುತ್ತೇನೆ ಎಂದು ಹೇಳಿದ್ದಾರೆ. ಇದು ಅಮೆರಿಕದ ರಾಜಕೀಯ ವಲಯದಲ್ಲಿ ಹೊಸ ಅಲೆ ಎಬ್ಬಿಸಿದೆ.

ಮಿಯಾಮಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, ಇರಾನ್ ಮತ್ತು ವೆನೆಜುವೆಲಾ (Venezuela And Iran) ನಂತರ, ಈಗ ಕ್ಯೂಬಾದ ಸರದಿ ಎಂದು ಹೇಳಿದ್ದಾರೆ. ಆದ್ರೆ ಕ್ಯೂಬಾ ವಿರುದ್ಧ ಯುಎಸ್ ಯಾವ ರೀತಿಯ ಕ್ರಮಕ್ಕೆ ಮುಂದಾಗುತ್ತದೆ ಎಂಬುದನ್ನು ಹೇಳದಿದ್ದರೂ, ಕೆಲವೊಮ್ಮೆ ಬಲವಾದ ಮಿಲಿಟರಿ ಪಡೆಯನ್ನ ಪ್ರಯೋಗಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ಕೊಟ್ಟಿದ್ದಾರೆ.
ವೆನೆಜುವೆಲಾ ಕ್ಯೂಬಾದ ಪ್ರಮುಖ ಇಂಧನ ಪೂರೈಕೆದಾರ ಆಗಿತ್ತು. ಆದ್ರೆ ನಿಕೋಲಸ್ ಮಡುರೊ ಅಧಿಕಾರ ಕಳೆದುಕೊಂಡ ನಂತರ ಕ್ಯೂಬಾ ದ್ವೀಪ ರಾಷ್ಟ್ರಕ್ಕೆ ವೆನೆಜುವೆಲಾದಿಂದ ತೈಲ ಪೂರೈಕೆಯನ್ನ ಸಂಪೂರ್ಣ ಕಡಿತಗೊಳಿಸಲಾಗಿದೆ. ಹೀಗಾಗಿ ಕ್ಯೂಬಾ ಒಂದೆಡೆ ಆರ್ಥಿಕ ಬಿಕ್ಕಟ್ಟು ಮತ್ತೊಂದು ಕಡೆ ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂಧನ ಕೊರತೆಯಿಂದ ಕ್ಯೂಬಾದಲ್ಲಿ ವಿದ್ಯುತ್ ಕಡಿತ ಮತ್ತು ಅಗತ್ಯ ವಸ್ತುಗಳ ಕೊರತೆಯೂ ಉಂಟಾಗಿದೆ. ಇದರಿಂದಾಗಿ ಸರ್ಕಾರವು ಅಸ್ತಿತ್ವ ಕಳೆದುಕೊಳ್ಳುವ ಆತಂಕದಲ್ಲಿದೆ. ಇದರ ಮಧ್ಯೆಯೇ ಕ್ಯೂಬಾ ಸರ್ಕಾರಕ್ಕೆ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ವೆನೆಜುವೆಲಾ, ಇರಾನ್ ಬಳಿಕ ಮುಂದಿನ ಸರದಿ ಕ್ಯೂಬಾದಾಗಿದೆ. ನಾನು ಬೃಹತ್ ಸೈನ್ಯವನ್ನ ನಿರ್ಮಿಸಿದ್ದೇನೆ. ಆದ್ರೆ ಎಂದಿಗೂ ಅದನ್ನ ಬಳಸಬೇಕಾಗಿಲ್ಲ. ಮೊದಲು ಸ್ನೇಹಪರ ಸ್ವಾಧೀನಕ್ಕೆ ಪ್ರಯತ್ನಿಸುತ್ತೇನೆ, ಇದು ಅಸಾಧ್ಯವಾಗಬಹುದು. ಹಾಗಾಗಿ ಕ್ಯೂಬಾಕ್ಕೆ ಏನು ಬೇಕಾದ್ರೂ ಮಾಡುವ ಸಾಮರ್ಥ್ಯ ನಮಗಿದೆ ಎಂದಿರುವ ಟ್ರಂಪ್, ಆ ದೇಶವನ್ನ ಆಕ್ರಮಿಸಿಕೊಳ್ಳುತ್ತೇನೆ ಅಥವಾ ಸ್ವತಂತ್ರಗೊಳಿಸುತ್ತೇನೆ ಎಂದು ಹೇಳಿದ್ದಾರೆ.
ಅಮೆರಿಕ ಮಾಧ್ಯಮಗಳ ವರದಿ ಪ್ರಕಾರ, ಯುಎಸ್ ಅಧಿಕಾರಿಗಳು ಕ್ಯೂಬಾ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಕ್ಯೂಬಾದ ಅಧ್ಯಕ್ಷ ಮಿಗುಯೆಲ್ ಡಿಯಾಜ್-ಕ್ಯಾನೆಲ್ ಅವರನ್ನು ಕಚೇರಿಯಿಂದ ತೆಗೆದುಹಾಕುವುದು ಯುಎಸ್‌ನ ಪ್ರಾಥಮಿಕ ಉದ್ದೇಶವಾಗಿದೆ.

