ವಾಷಿಂಗ್ಟನ್: ರಷ್ಯಾದಿಂದ (Russia) ಅಮೆರಿಕ (USA) ಈಗಲೂ ವ್ಯವಹಾರ ನಡೆಸುತ್ತಿದೆ ಎಂಬ ಭಾರತದ (India) ಆರೋಪಕ್ಕೆ ಉತ್ತರ ನೀಡದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನುಣುಚಿದ್ದಾರೆ.
ಅಮರಿಕ ಈಗಲೂ ಯುರೇನಿಯಂ ಮತ್ತು ರಸಗೊಬ್ಬರವನ್ನು ರಷ್ಯಾದಿಂದ ಖರೀದಿಸುತ್ತಿದೆ ಎಂಬ ಭಾರತದ ಮಾಡಿದ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಪ್ರಶ್ನೆಯನ್ನು ಕೇಳಲಾಯಿತು. ಈ ಪ್ರಶ್ನೆಗೆ ಯುರೇನಿಯಂ ಮತ್ತು ರಸಗೊಬ್ಬರ ವ್ಯಾಪಾರದ ಬಗ್ಗೆ ನನಗೆ ತಿಳಿದಿಲ್ಲ. ನಾನು ಅದನ್ನು ಪರಿಶೀಲಿಸಬೇಕು ಎಂದಷ್ಟೇ ಹೇಳಿದ್ದಾರೆ.
ರಷ್ಯಾ ಉಕ್ರೇನ್ (Ukraine) ಮೇಲೆ ದಾಳಿ ನಡೆಸಿದ ಬಳಿಕವೂ ಅಮೆರಿಕ ಶತಕೋಟಿ ಡಾಲರ್ ಮೌಲ್ಯದ ಇಂಧನ ಮತ್ತು ಎನ್‌ರಿಚ್ ಆಗಿರುವ ಯುರೇನಿಯಂ ಸೇರಿದಂತೆ ಹಲವು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ರಷ್ಯಾದ ದಾಳಿಗೂ ಮೊದಲು ಭಾರೀ ಪ್ರಮಾಣದಲ್ಲಿ ಅಮೆರಿಕ ರಷ್ಯದಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಈಗ ಪ್ರಮಾಣ ಕಡಿಮೆಯಾಗಿದ್ದರೂ ಆಮದು ಮುಂದುವರಿಯುತ್ತಿದೆ.
2024 ರಲ್ಲಿ 1.1 ಶತಕೋಟಿ ಡಾಲರ್ ಮೌಲ್ಯದ ರಸಗೊಬ್ಬರಗಳನ್ನು ಅಮೆರಿಕ ಆಮದು ಮಾಡಿದೆ. 2024 ರಲ್ಲಿ ಪಲ್ಲಾಡಿಯಮ್ ಸೇರಿದಂತೆ 878 ಮಿಲಿಯನ್ ಡಾಲರ್ ಮೌಲ್ಯದ ಅಮೂಲ್ಯ ಲೋಹಗಳ ಆಮದು ಮಾಡಿಕೊಂಡಿದೆ.
Journalist: India says the U.S. buys Russian uranium and fertilizers while criticising India for buying Russian energy. Your response?
Trump: I don’t know anything about that. pic.twitter.com/RsYLrzREDP
— Shashank Mattoo (@MattooShashank) August 5, 2025
ಭಾರತ ಹೇಳಿದ್ದೇನು?
ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿ ಉಕ್ರೇನ್ ಯುದ್ಧಕ್ಕೆ ಸಹಕಾರ ನೀಡುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರಿದ್ದಕ್ಕೆ ಭಾರತ ಅಂಕಿಸಂಖ್ಯೆಯನ್ನು ನೀಡುವ ಮೂಲಕ ಖಡಕ್ ತಿರುಗೇಟು ನೀಡಿತ್ತು. ಇದನ್ನೂ ಓದಿ: ಭಾರತದಂತಹ ಬಲಿಷ್ಠ ಮಿತ್ರ ರಾಷ್ಟ್ರದೊಂದಿಗೆ ಸಂಬಂಧವನ್ನ ಹದಗೆಡಿಸಬೇಡಿ – ಟ್ರಂಪ್‌ಗೆ ತಿವಿದ ನಿಕ್ಕಿ ಹ್ಯಾಲಿ
ಅಮೆರಿಕ ತನ್ನ ಪರಮಾಣು ಉದ್ಯಮಕ್ಕೆ ರಷ್ಯಾದಿಂದ ಯುರೇನಿಯಂ ಹೆಕ್ಸಾಫ್ಲೋರೈಡ್, ತನ್ನ ಇವಿ ಉದ್ಯಮಕ್ಕೆ ಪಲ್ಲಾಡಿಯಮ್, ರಸಗೊಬ್ಬರಗಳು ಮತ್ತು ರಾಸಾಯನಿಕಗಳನ್ನು ಈಗಲೂ ಆಮದು ಮಾಡಿಕೊಳ್ಳುತ್ತಿದೆ.
ಉಕ್ರೇನ್ ಸಂಘರ್ಷ ಆರಂಭವಾದ ನಂತರ ರಷ್ಯಾದಿಂದ ತೈಲ ಆಮದು ಮಾಡಿಕೊಂಡಿದ್ದಕ್ಕಾಗಿ ಭಾರತವನ್ನು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಗುರಿಯಾಗಿಸಿಕೊಂಡಿವೆ. ನಿಜವಾಗಿ ಸಂಘರ್ಷ ಪ್ರಾರಂಭವಾದ ನಂತರ ಸಾಂಪ್ರದಾಯಿಕವಾಗಿ ಬರುತ್ತಿದ್ದ ತೈಲಗಳನ್ನು ಯುರೋಪ್ ದೇಶಗಳು ಆಮದು ಮಾಡಿಕೊಳ್ಳಲು ಮುಂದಾದವು. ಈ ಕಾರಣಕ್ಕೆ ಭಾರತ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳಲು ಪ್ರಾರಂಭಿಸಿತ್ತು. ಜಾಗತಿಕ ತೈಲ ಮಾರುಕಟ್ಟೆಗಳ ಬೆಲೆ ಸ್ಥಿರವಾಗಿರಲು ಆ ಸಮಯದಲ್ಲಿ ಅಮೆರಿಕ ಭಾರತದ ನಿರ್ಧಾರಕ್ಕೆ ಬೆಂಬಲ ನೀಡಿತ್ತು.
ಭಾರತೀಯ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ತೈಲ ನೀಡಲು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ಭಾರತವನ್ನು ಟೀಕಿಸುವ ರಾಷ್ಟ್ರಗಳೇ ರಷ್ಯಾದೊಂದಿಗೆ ವ್ಯಾಪಾರದಲ್ಲಿ ತೊಡಗಿಕೊಂಡಿವೆ.
2024 ರಲ್ಲಿ ಯುರೋಪಿಯನ್ ಒಕ್ಕೂಟವು ರಷ್ಯಾದೊಂದಿಗೆ 67.5 ಬಿಲಿಯನ್ ಯುರೋಗಳಷ್ಟು ದ್ವಿಪಕ್ಷೀಯ ಸರಕು ವ್ಯಾಪಾರವನ್ನು ಹೊಂದಿತ್ತು. ಇದಲ್ಲದೆ 2023 ರಲ್ಲಿ 17.2 ಬಿಲಿಯನ್ ಯುರೋಗಳಷ್ಟು ಸೇವೆಗಳ ವ್ಯಾಪಾರವನ್ನು ಅದು ಹೊಂದಿತ್ತು. ಇದು ಆ ವರ್ಷ ಅಥವಾ ನಂತರ ರಷ್ಯಾದೊಂದಿಗೆ ಭಾರತ ನಡೆಸಿದ ಒಟ್ಟು ವ್ಯಾಪಾರಕ್ಕಿಂತ ಗಮನಾರ್ಹವಾಗಿ ಹೆಚ್ಚಿದೆ. 2024 ರಲ್ಲಿ ಯುರೋಪಿಯನ್ ದೇಶಗಳು ದಾಖಲೆಯ 16.5 ಮಿಲಿಯನ್ ಟನ್ ಎಲ್‌ಎನ್‌ಜಿಯನ್ನು ಆಮದು ಮಾಡಿಕೊಂಡಿದೆ. 2022 ರಲ್ಲಿ15.21 ಮಿಲಿಯನ್ ಟನ್ ಎಲ್‌ಎನ್‌ಜಿಯನ್ನು ಆಮದು ಮಾಡಿಕೊಂಡಿದ್ದು ಇದುವರೆಗಿನ ದಾಖಲೆಯಾಗಿತ್ತು.
ಯುರೋಪ್-ರಷ್ಯಾ ವ್ಯಾಪಾರವು ಕೇವಲ ಇಂಧನವನ್ನು ಮಾತ್ರವಲ್ಲ ರಸಗೊಬ್ಬರ, ಗಣಿಗಾರಿಕೆ ಉತ್ಪನ್ನಗಳು, ರಾಸಾಯನಿಕಗಳು, ಕಬ್ಬಿಣ ಮತ್ತು ಉಕ್ಕು ಮತ್ತು ಯಂತ್ರೋಪಕರಣಗಳು ಮತ್ತು ಸಾರಿಗೆ ಉಪಕರಣಗಳನ್ನು ಒಳಗೊಂಡಿದೆ. ಇದನ್ನೂ ಓದಿ: ಟ್ರಂಪ್ ಬೆದರಿಕೆಗೆ ಡೋಂಟ್ ಕೇರ್ – ಸಂಬಂಧ ಬಲಪಡಿಸಲು ರಷ್ಯಾಗೆ ಅಜಿತ್ ದೋವಲ್ ಭೇಟಿ
ಈ ಹಿನ್ನೆಲೆಯಲ್ಲಿ ಕೇವಲ ಭಾರತವನ್ನು ಗುರಿಯಾಗಿಸಿಕೊಂಡು ಮಾತನಾಡುವುದು ನ್ಯಾಯಸಮ್ಮತವಲ್ಲ ಮತ್ತು ಅಸಮಂಜಸವಾಗಿದೆ. ಯಾವುದೇ ಪ್ರಮುಖ ಆರ್ಥಿಕತೆಯಂತೆ ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
ಟ್ರಂಪ್ ಹೇಳಿದ್ದೇನು?
ಭಾರತವು ಬೃಹತ್ ಪ್ರಮಾಣದಲ್ಲಿ ರಷ್ಯಾದ ತೈಲವನ್ನು ಖರೀದಿಸುವುದಲ್ಲದೆ, ಖರೀದಿಸಿದ ಹೆಚ್ಚಿನ ತೈಲವನ್ನು ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ. ರಷ್ಯಾದ ಯುದ್ದದಿಂದಾಗಿ ಉಕ್ರೇನ್‌ನಲ್ಲಿ ಎಷ್ಟು ಜನರು ಕೊಲ್ಲಲ್ಪಡುತ್ತಿದ್ದಾರೆ ಎಂಬುದು ಅವರಿಗೆ ಮುಖ್ಯವಲ್ಲ. ಈ ಕಾರಣಕ್ಕೆ ಭಾರತವು ಅಮೆರಿಕಕ್ಕೆ ಪಾವತಿಸುವ ಸುಂಕವನ್ನು ನಾನು ಗಣನೀಯವಾಗಿ ಹೆಚ್ಚಿಸುತ್ತೇನೆ.