ವಾಷಿಂಗ್ಟನ್: ಇರಾನ್-ಇಸ್ರೇಲ್ ಯುದ್ಧದ ಬಳಿಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮೊದಲ ಬಾರಿಗೆ ಮುಖಾಮುಖಿಯಾಗಲಿದ್ದಾರೆ. ಜು.7ರಂದು (ಸೋಮವಾರ) ಶ್ವೇತಭವನದಲ್ಲಿ ನೆತನ್ಯಾಹು ಟ್ರಂಪ್ ಅವರನ್ನು ಭೇಟಿ ಮಾಡಲಿದ್ದಾರೆ.
ಭೇಟಿ ವೇಳೆ ಗಾಜಾ ಪಟ್ಟಿಯಲ್ಲಿ (Gaza Strip) ಕದನ ವಿರಾಮ, ಇರಾನ್‌ಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಈ ಸಭೆ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ ಎಂದು ತಜ್ಞರು ಅಂದಾಜಿಸಿರುವುದಾಗಿ ವರದಿಗಳು ತಿಳಿಸಿವೆ.
ಇಸ್ರೇಲ್-ಇರಾನ್ ನಡುವಿನ ಕದನ ವಿರಾಮದ ಬಳಿಕ ಟ್ರಂಪ್ ಗಾಜಾ ಪಟ್ಟಿಯಲ್ಲಿ ಕದನ ವಿರಾಮಕ್ಕೆ ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ಶ್ವೇತಭವನದ (White House) ಸಭೆಯಲ್ಲಿ ಉಭಯ ನಾಯಕರ ನಡುವಿನ ಪ್ರಮುಖ ಚರ್ಚಾ ವಿಷಯ ಇದೇ ಆಗಿರಲಿದೆ ಎಂದು ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್ನ್ಯಾಷನಲ್ ಸ್ಟಡೀಸ್ (CSIS) ನ ಹಿರಿಯ ಸಲಹೆಗಾರ್ತಿ ಮೋನಾ ಯಾಕೌಬಿಯನ್ ಹೇಳಿದ್ದಾರೆ.
ಅಲ್ಲದೇ ಅಮೆರಿಕದ ಕದನ ವಿರಾಮ ಪ್ರಸ್ತಾಪಕ್ಕೆ ಹಮಾಸ್ ಕೂಡ ಸಹಮತ ಸೂಚಿಸಿದೆ. ಒತ್ತೆಯಾಳುಗಳ ಬಿಡುಗಡೆ ಮತ್ತು ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಮಾತುಕತೆಗೆ ಸಿದ್ಧವಿರುವುದಾಗಿ ಹಮಾಸ್ ಹೇಳಿದೆ ಎಂದು ತಿಳಿಸಿದ್ದಾರೆ.
ಇರಾನ್ ಬಗ್ಗೆಯೂ ಮಹತ್ವದ ಚರ್ಚೆ
ಮುಂದುವರಿದು ಮಾತನಾಡಿರುವ ಯಾಕೌಬಿಯನ್, ಟ್ರಂಪ್ ಮತ್ತು ನೆತನ್ಯಾಹು ಇರಾನ್ ಬಗೆಗೆ ಒಂದೇ ರೀತಿಯ ಅಭಿಪ್ರಾಯ ಹೊಂದಿದ್ದಾರೆ. ಇತ್ತೀಚೆಗೆ ಇರಾನ್ ಮೇಲಿನ ಜಂಟಿ ಮಿಲಿಟರಿ ಕಾರ್ಯಾಚರಣೆ ಇದಕ್ಕೆ ನಿದರ್ಶನವಾಗಿದೆ. ಹೀಗಾಗಿ ಭವಿಷ್ಯದ ಕಾರ್ಯತಂತ್ರಗಳ ಬಗ್ಗೆ ಉಭಯ ನಾಯಕರು ಒಗ್ಗಟಿನ ನಿಲುವು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.