ವಾಷಿಂಗ್ಟನ್: ಐಫೋನ್ಗಳನ್ನು (iPhone) ಅಮೆರಿಕದಲ್ಲಿ ಉತ್ಪಾದನೆ ಮಾಡುವಂತೆ ಆಪಲ್ಗ ಸೂಚಿಸಿದ್ದ ಡೊನಾಲ್ಡ್ ಟ್ರಂಪ್ (Donald Trump) ಈಗ ಮೊಬೈಲ್ ಫೋನ್ ಮತ್ತು ವಯರ್ಲೆಸ್ ಸೇವಾ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಟ್ರಂಪ್ ಕುಟುಂಬ ಈಗ Trump Mobile T1 Phone ಹೆಸರಿನಲ್ಲಿ ಆಂಡ್ರಾಯ್ಡ್ ಫೋನ್ ಮಾರುಕಟ್ಟೆ ಬಿಡುಗಡೆ ಮಾಡಿದೆ.
ಚಿನ್ನದ ಬಣ್ಣದ ಫೋನ್ ಇದಾಗಿದ್ದು 499 ಡಾಲರ್ (ಅಂದಾಜು 43,000 ರೂ.) ದರವನ್ನು ನಿಗದಿ ಮಾಡಲಾಗಿದೆ. ಈ ಫೋನನ್ನು ಅಮೆರಿಕದಲ್ಲೇ ಉತ್ಪಾದನೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. The Trump Organization ನಲ್ಲಿ ಎರಿಕ್ ಟ್ರಂಪ್ ಮತ್ತು ಡೊನಾಲ್ಡ್ ಟ್ರಂಪ್ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದಾರೆ.
T1 ಮೊಬೈಲ್ ಸೇವೆಯು ʼ47 ಪ್ಲಾನ್ʼ ಹೆಸರಿನ ಸೇವೆಯನ್ನು ನೀಡುತ್ತಿದೆ. ಟ್ರಂಪ್ ಅಮೆರಿಕದ 47ನೇ ಅಧ್ಯಕ್ಷರಾಗಿದ್ದಾರೆ. ಈ ಕಾರಣಕ್ಕೆ ಈ ಸೇವೆಗೆ 47 ಪ್ಲಾನ್ ಎಂಬ ಹೆಸರನ್ನು ಇಡಲಾಗಿದೆ
ಟ್ರಂಪ್ ಮೊಬೈಲ್ ವರ್ಚುವಲ್ ಆಪರೇಟರ್ ಆಗಿ ಕೆಲಸ ಮಾಡುತ್ತದೆ. ಅಂದರೆ ಇದು ಅಮೆರಿಕದ ಟೆಲಿಕಾಂ ದೈತ್ಯ ಕಂಪನಿಗಳಾದ Verizon, AT&T ಮತ್ತು T-Mobile ನಿಯಂತ್ರಿಸುವ ನೆಟ್ವರ್ಕ್ಗಳ ಮೂಲಕ ಸೇವೆಗಳನ್ನು ನೀಡುತ್ತದೆ. 5G ಸೇವೆಗೆ ಮಾಸಿಕ 47.45 ಡಾಲರ್(4,097 ರೂ.) ದರವನ್ನು ನಿಗದಿ ಮಾಡಲಾಗಿದೆ. ಇದನ್ನೂ ಓದಿ: ಇರಾನ್ ಜನ ತಕ್ಷಣವೇ ಟೆಹ್ರಾನ್ ಖಾಲಿ ಮಾಡಿ: ಟ್ರಂಪ್ ಸೂಚನೆ
ಫೋನಿನ ಗುಣವೈಶಿಷ್ಟ್ಯಗಳೇನು?
6.78 ಇಂಚಿನ AMOLED ಸ್ಕ್ರೀನ್, 1080 x 2460 ಪಿಕ್ಸೆಲ್, ~396 ಪಿಪಿಐ ಹೊಂದಿದೆ. ನ್ಯಾನೋ ಸಿಮ್ + ಇ ಸಿಮ್ ಹಾಕಬಹುದಾಗಿದ್ದು ಅಕ್ಟಾಕೋರ್ ಪ್ರೊಸೆಸರ್ನೊಂದಿಗೆ ಬಂದಿದೆ.
ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಂ, 12GB RAM, 256GB ಆಂತರಿಕ ಮೆಮೊರಿ ಹೊಂದಿದ್ದು ಕಾರ್ಡ್ ಮೂಲಕ ಹೆಚ್ಚುವರಿ ಮೆಮೊರಿ ವಿಸ್ತರಿಸಬಹುದಾಗಿದೆ. ಇದನ್ನೂ ಓದಿ: ಟ್ರಂಪ್ 25% ಸುಂಕ ಹೇರಿದ್ರೂ ಭಾರತದ ಐಫೋನ್ ಚೀಪ್ – ಅಮೆರಿಕದ್ದು ದುಬಾರಿ
ಹಿಂದು ಗಡೆ 50 ಎಂಪಿ (ವೈಡ್), 2 ಎಂಪಿ(ಮ್ಯಾಕ್ರೋ), 2 ಎಂಪಿ(ಡೆಪ್ತ್) ಕ್ಯಾಮೆರಾವನ್ನು ನೀಡಲಾಗಿದೆ. ಮುಂದುಗಡೆ 16 ಎಂಪಿ ಕ್ಯಾಮೆರಾವನ್ನು ಹೊಂದಿದೆ. ಫೋನಿಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಜೊತೆ 5000 mAh ಬ್ಯಾಟರಿಯನ್ನು ನೀಡಲಾಗಿದೆ.
ಈ ಫೋನ್ ಖರೀದಿಸುವ ಗ್ರಾಹಕರು www.trumpmobile.com ಹೋಗಿ ಪ್ರಿ ಆರ್ಡರ್ ಮಾಡಬಹುದಾಗಿದೆ.