ನವದೆಹಲಿ: ಗಲ್ವಾನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಸೈನಿಕರ ಬಗ್ಗೆ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ (Rahul Gandhi) ಅವರನ್ನು ಸುಪ್ರೀಂ ಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡಿದೆ.ನಿಜವಾದ ಭಾರತೀಯ ವ್ಯಕ್ತಿ ಈ ರೀತಿ ಮಾತನಾಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ.
ಭಾರತ್ ಜೋಡೋ (Bharat Jodo) ಯಾತ್ರೆಯ ಸಂದರ್ಭದಲ್ಲಿ ಭಾರತೀಯ ಸೇನೆಯ ವಿರುದ್ಧ ನೀಡಿದ್ದ ಹೇಳಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ಎ.ಜಿ. ಮಸಿಹ್ ಪೀಠವು ರಾಹುಲ್ ಗಾಂಧಿ ಹೇಳಿಕೆಗಳಿಗೆ ಅಸಮಾಧಾನ ವ್ಯಕ್ತಪಡಿಸಿತು. ರಾಹುಲ್ ಗಾಂಧಿ ಪರವಾಗಿ ವಾದಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ವಿರೋಧ ಪಕ್ಷದ ನಾಯಕರೊಬ್ಬರು ಸಮಸ್ಯೆಗಳನ್ನು ಎತ್ತಲು ಸಾಧ್ಯವಾಗದಿದ್ದರೆ ಅದು ದುರದೃಷ್ಟಕರ ಪರಿಸ್ಥಿತಿ ಎಂದು ವಾದಿಸಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಪ್ರತಿಭಟನಾ ರ‍್ಯಾಲಿ ಆ.8ಕ್ಕೆ ಮುಂದೂಡಿಕೆ: ಡಿಕೆಶಿ
ಇದಕ್ಕೆ ನ್ಯಾಯಮೂರ್ತಿ ದತ್ತಾ ಪ್ರತಿಕ್ರಿಯಿಸಿ, ಚೀನಾ ಭೂ ಸ್ವಾಧೀನಪಡಿಸಿಕೊಂಡ ಮಾಹಿತಿ ನಿಮಗೆ ಹೇಗೆ ತಿಳಿಯುತ್ತದೆ? 2,000 ಚದರ ಕಿ.ಮೀ ಪ್ರದೇಶವನ್ನು ಚೀನಿಯರು ಆಕ್ರಮಿಸಿಕೊಂಡಿದ್ದಾರೆ ಎಂದು ನೀವು ಹೇಗೆ ಹೇಳುತ್ತೀರಿ? ನೀವು ವಿರೋಧ ಪಕ್ಷದ ನಾಯಕರು, ಸಂಸತ್ತಿನಲ್ಲಿ ಏನಾದರೂ ಹೇಳಿ, ನೀವು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಏಕೆ ಹೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಈ ಆರೋಪಕ್ಕೆ ಯಾವುದೇ ವಿಶ್ವಾಸಾರ್ಹ ಸಾಕ್ಷ್ಯವಿದೆಯೇ? ಗಡಿಯಲ್ಲಿ ಸಂಘರ್ಷ ಉಂಟಾದಾಗ ಇದನ್ನೆಲ್ಲಾ ಹೇಳಬಲ್ಲಿರಾ? ಯಾವುದೇ ಸಾಕ್ಷ್ಯ ಇಲ್ಲದೇ ಈ ರೀತಿಯ ಹೇಳಿಕೆಗಳನ್ನು ಯಾಕೆ ನೀಡುತ್ತೀರಿ? ನೀವು ನಿಜವಾದ ಭಾರತೀಯರಾಗಿದ್ದರೆ, ಅಂತಹ ಹೇಳಿಕೆಗಳನ್ನು ನೀಡುತ್ತಿರಲಿಲ್ಲ ಎಂದು ಹೇಳಿ ಕುಟುಕಿದೆ.
ಸದ್ಯ ಸುಪ್ರೀಂಕೋರ್ಟ್ ರಾಹುಲ್ ಗಾಂಧಿಗೆ ರಿಲೀಫ್ ನೀಡಿದ್ದು, ಲಕ್ನೋ ಕೋರ್ಟ್ ಮಾನನಷ್ಟ ಪ್ರಕರಣದ ವಿಚಾರಣೆಗೆ ತಡೆ ನೀಡಿದೆ. ಅಲ್ಲದೆ 3 ವಾರಗಳ ನಂತರ ವಿಚಾರಣೆಗೆ ಸಮಯವನ್ನು ನಿಗದಿಪಡಿಸಿದೆ.
ಏನಿದು ಪ್ರಕರಣ?
2022ರ ಡಿಸೆಂಬರ್ 16ರಂದು ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿಯವರು ಭಾರತೀಯ ಸೇನೆಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಉದಯ್ ಶಂಕರ್ ಶ್ರೀವಾಸ್ತವ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದನ್ನೂ ಓದಿ: ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್; ಸಚಿವ ಶಿವಾನಂದ ಪಾಟೀಲ್‌ಗೆ ಸುಪ್ರೀಂ ಚಾಟಿ
ಭಾರತ ಹಾಗೂ ಚೀನಾ ಸೇನಾಪಡೆಗಳ ನಡೆದಿದ್ದ ಸಂಘರ್ಷದ ಕುರಿತು ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾಗ ರಾಹುಲ್ ಗಾಂಧಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದ ಭಾರತೀಯ ಸೇನೆಯ ಮಾನಹಾನಿ ಮತ್ತು ಸ್ಥೈರ್ಯ ಕುಗ್ಗಿಸಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾದ ಸೈನಿಕರು ಭಾರತೀಯ ಸೇನಾ ಸಿಬ್ಬಂದಿಯನ್ನು ಥಳಿಸುತ್ತಿದ್ದಾರೆʼ ಎಂಬ ರಾಹುಲ್ ಅವರ ಹೇಳಿಕೆಯು ವ್ಯಾಪಕ ಚರ್ಚೆ ಮತ್ತು ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.