ಬೆಂಗಳೂರು: ನಟ ದರ್ಶನ್ (Darshan) ಖೈದಿ ನಂಬರಿನಲ್ಲಿ ಮಗುವಿನ ಫೋಟೋ ಶೂಟ್ (Photo Shoot) ಮಾಡಿಸಿದರಿಗೆ ಬಿಸಿ ಮುಟ್ಟಿಸಲು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (State Commission for Protection of Child Rights) ಮುಂದಾಗಿದೆ.
ಹೌದು. ದರ್ಶನ್ ಮೇಲಿನ ಅಂಧಭಿಮಾನ ಪ್ರದರ್ಶನಕ್ಕೆ ಮುಂದಾಗಿ ಕಾನೂನಿನ ಕುಣಿಕೆಗೆ ಈಗ ಪೋಷಕರು ತಗ್ಲಾಕಿಕೊಂಡಿದ್ದಾರೆ. ಈ ವಿಚಾರ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದೆ. ಈಗ ಪೊಲೀಸ್ ಇಲಾಖೆಯ ಮೂಲಕ ಪೋಷಕರ ಪತ್ತೆ ಕಾರ್ಯಕ್ಕೆ ಮುಂದಾಗಿದೆ.
ಪಬ್ಲಿಕ್ ಟಿವಿಗೆ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ್ ಕೊಸಂಬೆ ಪ್ರತಿಕ್ರಿಯಿಸಿ, ಈ ರೀತಿ ಫೋಟೋ ಶೂಟ್ ಮಾಡಿಸಿರುವುದು ನಿಜಕ್ಕೂ ಖಂಡನೀಯ. ಹೀಗಾಗಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಈ ಬಗ್ಗೆ ಇವತ್ತು ಪೊಲೀಸ್ ಇಲಾಖೆ ಐಟಿ ಸೆಲ್ ಪತ್ರ ಬರೆಯಲಾಗುತ್ತದೆ. ಫೋಟೋ ಶೂಟ್ ಮಾಡಿಸಿದವರ ಪತ್ತೆ ಮಾಡಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ದರ್ಶನ್ ಭೇಟಿಗೆ ಅವಕಾಶ ಸಿಗದೇ ವಾಪಸ್ ಆದ ಧನ್ವೀರ್
ಈ ಫೋಟೋ ಶೂಟ್ ಪ್ರಕರಣವನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ಇದು ಬಾಲ ನ್ಯಾಯ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಕಾನೂನಿನಡಿ ಯಾವೆಲ್ಲ ಕ್ರಮಗಳಿಗೆ ಸಾಧ್ಯತೆ ಇದೆಯೋ ಅದೆಲ್ಲವನ್ನೂ ಕೈಗೊಳ್ಳುತ್ತೇವೆ ಎಂದರು.