– ಕೇಂದ್ರ ಅರಣ್ಯ ಇಲಾಖೆಯ ಅಧಿಸೂಚನೆಗೆ ಪರಿಸರ ಪ್ರೇಮಿಗಳ ವಿರೋಧ
– 10 ಕಿ.ಮೀ. ಬದಲಾಗಿ 1 ಕಿ.ಮೀ. ಜಾಗವನ್ನು ಸೂಕ್ಷ್ಮ ಅರಣ್ಯ ಪ್ರದೇಶವನ್ನಾಗಿ ಘೋಷಣೆ
ಗದಗ: ಆರ್ಯುವೇದ ಔಷಧಿಯ ಸಸ್ಯಕಾಶಿ, ಉತ್ತರ ಕರ್ನಾಟಕದ ಸಹ್ಯಾದ್ರಿ, ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿರುವ ಕಪ್ಪತಗುಡ್ಡಕ್ಕೆ (Kappata Gudda) ಮತ್ತೆ ಕಂಟಕ ಶುರುವಾದಂತಿದೆ. ವನ್ಯಜೀವಿ ಧಾಮ ಕಪ್ಪತ್ತಗುಡ್ಡಕ್ಕೆ ಮತ್ತೆ ಗಣಿ ಕುಳಗಳು ಕನ್ನ ಹಾಕುತ್ತಾರಾ ಎಂಬ ಗಂಭೀರ ಪ್ರಶ್ನೆ ಎದ್ದಿದೆ.
ಗದಗ (Gadag) ಜಿಲ್ಲೆಯಲ್ಲಿ ಸುಮಾರು 69 ಕಿ.ಮೀ ವ್ಯಾಪ್ತಿವರೆಗೆ ಕಪ್ಪತಗುಡ್ಡ ವ್ಯಾಪಿಸಿದೆ. ವನ್ಯಜೀವಿ ಧಾಮ ಎಂದು ಸಹ ಘೋಷಣೆ ಮಾಡಲಾಗಿದೆ. ಅದರೆ ಸುತ್ತಲಿನ 10 ಕಿ.ಮೀ ಜಾಗವನ್ನು ಸೂಕ್ಷ್ಮ ಅರಣ್ಯ ಪ್ರದೇಶ ಎಂದು ಘೋಷಿಸಲಾಗಿದೆ. ಈಗ 10 ಕಿ.ಮೀ. ಬದಲಾಗಿ 1 ಕಿ.ಮೀ ಜಾಗವನ್ನು ಸೂಕ್ಷ್ಮ ಅರಣ್ಯ ಪ್ರದೇಶ ಎಂದು ಘೋಷಿಸಲು ಸರ್ಕಾರ ಮುಂದಾಗಿದೆ.
- Advertisement3
- Advertisement
ಈ ಬಗ್ಗೆ ಕೇಂದ್ರ ಪರಿಸರ, ಅರಣ್ಯ ಇಲಾಖೆ ಹಾಗೂ ಹವಾಮಾನ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಯಾರಾದರೂ ಪರ, ವಿರೋಧ ಬಗ್ಗೆ ಅರ್ಜಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿದೆ. ಸಾರ್ವಜನಿಕರ ಪ್ರತಿಕ್ರಿಯೆ ನೀಡಲು ನ. 30 ಕೊನೆಯ ದಿನವಾಗಿದೆ. ಇದನ್ನೂ ಓದಿ: ಬೆಂಗ್ಳೂರು ಜೈಲಿನಲ್ಲಿ ಉಗ್ರ ಕೃತ್ಯ ಎಸಗಿ ಪರಾರಿ – ರುವಾಂಡದಲ್ಲಿ ಸೆರೆ
ಅಧಿಸೂಚನೆ ಹೊರಡಿಸಿ ಈಗಾಗಲೇ 28 ದಿನಗಳು ಕಳೆದಿವೆ. ಈಗ ಎರಡು ದಿನ ಬಾಕಿ ಇರುವಾಗ ವಿಷಯ ಪ್ರಕಟವಾಗಿದೆ. ಇದರಿಂದ ಪರಿಸರ ಪ್ರೇಮಿಗಳಲ್ಲಿ ಆತಂಕ ಶುರುವಾಗಿದೆ. ಸೂಕ್ಷ್ಮ ಅರಣ್ಯ ಪ್ರದೇಶ ವ್ಯಾಪ್ತಿ ಕಡಿಮೆಗೊಳಿಸಿರುವುದರಿಂದ ಕಪ್ಪತ್ತಗುಡ್ಡಕ್ಕೆ ಗಂಡಾಂತರ ಎದುರಾಗಲಿದೆ. ಇಲ್ಲಿ ಮತ್ತೆ ಅದಿರು, ಕಣಿಜ ನಿಕ್ಷೇಪ ಹೀಗೆ ಅನೇಕ ಗಣಿಗಾರಿಕೆಗೆ (Mining) ಅವಕಾಶ ಕೊಡಲಾಗುತ್ತದೆ. ಕಪ್ಪತ್ತಗುಡ್ಡ ಹಸಿರು ಉಳಿಬೇಕು. ಈ ನಿಟ್ಟಿನಲ್ಲಿ ಚರ್ಚೆ ಮಾಡಿ, ಸೂಕ್ಷ್ಮ ಪ್ರದೇಶ ವ್ಯಾಪ್ತಿ ಹೆಚ್ಚಿಸಬೇಕು. ಯಾವುದೇ ಕಾರಣಕ್ಕೂ ವಿಸ್ತೀರ್ಣ ಕಡಿಮೆ ಮಾಡಬಾರದು ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.
ಕಪ್ಪತಗುಡ್ಡದಲ್ಲಿ ಮಣ್ಣು ಗಣಿಗಾರಿಕೆ, ಚಿನ್ನದ ಗಣಿಗಾರಿಕೆ ನಡೆಸಲು ಹಲವು ಕಂಪನಿಗಳು ಹುನ್ನಾರ ನಡೆಸಿವೆ. ಸದ್ಯ 10 ಕಿ.ಮಿ ವ್ಯಾಪ್ತಿಯ ಒಳಗಾಗಿ ಯಾವುದೇ ಗಣಿಗಾರಿಕೆಗೆ ಅವಕಾಶ ನೀಡುವಂತಿಲ್ಲ. ಆದರೆ ಗಣಿ ಕುಳಗಳು, ಭೂಗಳ್ಳರು, ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದು ವಿಸ್ತೀರ್ಣ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಜಯಕರ್ನಾಟಕ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಹವ್ಹಾಣ ನೇತೃತ್ವದಲ್ಲಿ ಗುರುವಾರ ಕಪ್ಪತಗುಡ್ಡ ಉಳಿಯುವಿಕೆಗಾಗಿ ಆಗ್ರಹಿಸಿ, ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ಮಾಡಲಾಯಿತು. ಯಾವುದೇ ಕಾರಣಕ್ಕೂ ಇಲ್ಲಿ ಗಣಿಗಾರಿಕೆ ಸೇರಿದಂತೆ ಯಾವುದಕ್ಕೂ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರ ಹಾಗೂ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಪ್ರತಿಕ್ರಿಯಿಸಿ, ಈಗ ಕಪ್ಪತಗುಡ್ಡ ವ್ಯಾಪ್ತಿಯ ಸುತ್ತಲು ಡೀಮ್ಡ್ ಅರಣ್ಯ ಪ್ರದೇಶವಿದೆ. ಕಪ್ಪತಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆ ಮಾಡಬೇಕಾದರೆ ಕೇಂದ್ರ ವನ್ಯಜೀವಿ ಮಂಡಳಿ, ಪರಸರ ಇಲಾಖೆ ಅವಕಾಶ ನೀಡಬೇಕು. ಜೊತೆಗೆ ರಾಜ್ಯ ಸಚಿವ ಸಂಪುಟದ ಅನುಮತಿ ಬೇಕು. ಸೂಕ್ಷ್ಮ ಅರಣ್ಯ ಪ್ರದೇಶ ವ್ಯಾಪ್ತಿ ಸುಪ್ರೀಂಕೋರ್ಟ್ (Supreme Court) ಆದೇಶದ ಪ್ರಕಾರ ಕಡಿಮೆಗೊಳಿಸಲಾಗಿದೆ. ಸಂಘಟಕರು ಕೊಟ್ಟ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.