ಉಡುಪಿ: ನೆರೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ಕೊಡಗಿನ ಜನತೆಗೆ ಹೇಗೆಲ್ಲಾ ಸಹಾಯ ಮಾಡಲು ಸಾಧ್ಯವಾಗುತ್ತೋ ಅದನ್ನೆಲ್ಲಾ ಜನ ಮಾಡಿದ್ದಾರೆ. ಇದೀಗ ಉಡುಪಿ ಕಲಾವಿದರು ವಿಶೇಷ ರೀತಿಯಲ್ಲಿ ಕೊಡಗು ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಮಣಿಪಾಲ ಮತ್ತು ಕುಂದಾಪುರದ ತ್ರಿವರ್ಣ ಕಲಾಕೇಂದ್ರದ 39 ಯುವ ಕಲಾವಿದರು ಒಂದು ಚಿತ್ರ ಕಲಾ ಪ್ರದರ್ಶನ ಏರ್ಪಡಿಸಿ ಇಲ್ಲಿ ಸಂಗ್ರಹಗೊಂಡ ಹಣವನ್ನು ಕೊಡಗಿಗೆ ನೀಡಲು ಮುಂದಾಗಿದ್ದಾರೆ. ಕಲಾವಿದರು ತಾವು ರಚಿಸಿದ ಚಿತ್ರಗಳನ್ನು ಪ್ರದರ್ಶನಕ್ಕಿಟ್ಟು ಬೆಲೆ ನಿಗದಿ ಮಾಡಿ ಮಾಡಿದ್ದರು. ಮಾರಾಟದಲ್ಲಿ ಬಂದ ದುಡ್ಡಿನಲ್ಲಿ ಒಂದು ರೂಪಾಯಿ ಇಟ್ಟುಕೊಳ್ಳದೇ ಎಲ್ಲವನ್ನೂ ಕೊಡಗು ಜಿಲ್ಲೆಗೆ ಕೊಡಲಿದ್ದಾರೆ.
ಈ ವಿಭಿನ್ನ ಪ್ರಯತ್ನದ ಸಾರಥಿ ಹರೀಶ್ ಸಾಗ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಮ್ಮ ಕಲಾವಿದರು ಹೆಚ್ಚು ಶ್ರೀಮಂತರಲ್ಲ. ಆದರೂ ಕಷ್ಟದಲ್ಲಿ ಇರುವ ಕೊಡಗಿಗೆ ನಮ್ಮ ಕೈಯಿಂದ ಏನು ಸಹಾಯ ಆಗಬಹುದು ಅಂತ ಆಲೋಚನೆ ಮಾಡಿದಾಗ ಈ ಐಡಿಯಾ ಹೊಳೆಯಿತು. ಕಲಾಕೃತಿ ಮಾರಿ ಒಂದು ಲಕ್ಷವಾದರೂ ಕೊಡಬೇಕೆಂದಿತ್ತು. 45 ಸಾವಿರ ರೂಪಾಯಿ ಸಂಗ್ರಹವಾಗಿದೆ. ಸ್ವಲ್ಪ ಹಣ ಒಟ್ಟು ಮಾಡಿ ಕೊಡಗು ಜಿಲ್ಲೆಗೆ 50 ಸಾವಿರ ರೂಪಾಯಿ ಕೊಡುತ್ತೇವೆ ಎಂದು ಹೇಳಿದರು.
ಗೋ ನಿಧಿ ಎಂಬ ಕಾನ್ಸೆಪ್ಟ್ ರೆಡಿ ಮಾಡಿದ ಈ ಟೀಂ, ದೇಶಾದ್ಯಂತ ಗೋವಿನ ರಕ್ಷಣೆ ಆಗಬೇಕು. ಅದರ ಜೊತೆ ಕೊಡಗಿನ ಸಂತ್ರಸ್ತರಿಗೂ ಸಹಾಯವಾಗಬೇಕೆಂದು ಈ ಆಲೋಚನೆಯನ್ನು ಮಾಡಿದ್ದಾರೆ. ಮೂರು ದಿನಗಳ ಕಾಲ ಮಣಿಪಾಲದಲ್ಲಿ ಪ್ರದರ್ಶನ ಮಾಡಿದ್ದು ನಾಲ್ಕೈದು ಕಲೆಗಳಿಗೆ ಬೇಡಿಕೆ ಬಂದಿದೆ. ಹಲವಾರು ಮಾಧ್ಯಮಗಳಲ್ಲಿ ವಿದ್ಯಾರ್ಥಿಗಳು ಕಲಾಕೃತಿ ಬರೆದಿದ್ದು ಗೋವನ್ನೂ ವಿವಿಧ ದೃಷ್ಟಿಕೋನದಲ್ಲಿ ನೋಡಿದ್ದಾರೆ.
ಕಲಾವಿದೆ ಪವಿತ್ರ ಮಾತನಾಡಿ, ಚಲನಚಿತ್ರ ನಟರು, ಶ್ರೀಮಂತರು ನಾವು ಕೊಟ್ಟ ಮೌಲ್ಯವನ್ನು ಒಬ್ಬರೇ ಕೊಟ್ಟಿರಬಹುದು. ಹನಿಗೂಡಿ ಹಳ್ಳ ಎಂಬಂತೆ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ. ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮನೋಭಾವನೆ ಎಲ್ಲರಲ್ಲೂ ಬಂದಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv