ದಕ್ಷಿಣದ ಹೆಸರಾಂತ ನಟಿ ತ್ರಿಷಾ (Trisha) ಅವರಿಗೆ ಮಾನಹಾನಿ ರೀತಿಯಲ್ಲಿ ಮಾತನಾಡಿದ್ದ ತಮಿಳಿನ ಖ್ಯಾತ ನಟ ಮನ್ಸೂರ್ ಅಲಿಖಾನ್ (Mansoor Ali Khan) ಗೆ ಮದ್ರಾಸ್ ಹೈಕೋರ್ಟ್ ಮತ್ತೆ ಎಚ್ಚರಿಕೆಯ ಮಾತುಗಳನ್ನು ಆಡಿದೆ. ತ್ರಿಷಾ ಅವರಿಗೆ ನಾನು ಮಾನ ಹಾನಿ ಆಗುವಂತಹ ಮಾತುಗಳನ್ನು ಆಡಿಲ್ಲ. ನನ್ನ ಮಾತುಗಳನ್ನು ಎಡಿಟ್ ಮಾಡಲಾಗಿದೆ. ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲವೆಂದು ಮನ್ಸೂರ್ ನುಡಿದಿದ್ದರು. ತಮ್ಮ ಮೇಲಿನ ಪ್ರಕರಣವನ್ನು ರದ್ದುಗೊಳಿಸುವಂತೆ ಮತ್ತು ನಿರೀಕ್ಷನಾ ಜಾಮೀನು ನೀಡುವಂತೆ ಚೆನ್ನೈನ ಪ್ರಧಾನ ಸೆಷನ್ಸ್ ನ್ಯಾಯಾಲಯಕ್ಕೆ ಈ ಹಿಂದೆ ಮನ್ಸೂರ್ ಮೊರೆ ಹೋಗಿದ್ದರು. ಆಗಲೂ ಸೆಷನ್ಸ್ ನ್ಯಾಯಾಲಯ ಛೀಮಾರಿ ಹಾಕಿತ್ತು.
ಈ ಪ್ರಕರಣ ಸುಖಾಂತ್ಯಗೊಳಲಿದೆ ಎನ್ನುವ ಹೊತ್ತಿನಲ್ಲಿ, ಮನ್ಸೂರ್ ಅಲಿಖಾನ್ ಮತ್ತೆ ತ್ರಿಷಾ ಹಾಗೂ ಇನ್ನೂ ಇಬ್ಬರ ಕಲಾವಿದರ ಬಗ್ಗೆ ಅಬ್ಬರಿಸಿದ್ದರು. ತ್ರಿಷಾ ವಿಚಾರದಲ್ಲಿ ಸುಖಾಸುಮ್ಮನೆ ತಮ್ಮ ಮಾನಹಾನಿ ಮಾಡಿದ್ದಾರೆ ಎಂದು ನಟಿ ಖುಷ್ಭೂ (Khushboo) ಹಾಗೂ ಚಿರಂಜೀವಿ (Chiranjeevi) ಅವರ ಮೇಲೆ ಹರಿಹಾಯ್ದಿದ್ದರು. ಅವರ ಮೇಲೆ ಮಾನನಷ್ಟ (Defamation) ಮೊಕದ್ದಮೆ ಹೂಡುವುದಾಗಿ ಹೇಳಿಕೊಂಡಿದ್ದರು.
ಅದರಂತೆ ಮದ್ರಾಸ್ ಹೈಕೋರ್ಟಿಗೆ ಮನ್ಸೂರ್ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಇಂದು ಈ ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಸತೀಶ್ ಕುಮಾರ್ ಅವರು, ಮನ್ಸೂರ್ ಅಲಿಖಾನ್ ಅವರಿಗೆ ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕವಾಗಿ ಹೀಗೆ ಅಸಭ್ಯವಾಗಿ ವರ್ತಿಸಲು ಅನುಮತಿ ಇದೆಯೇ? ಎಂದು ಪ್ರಶ್ನೆ ಮಾಡಿದರು. ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎನ್ನುವುದು ಅರಿವಿರಬೇಕು. ಇಂತಹ ಪ್ರಕರಣಗಳನ್ನು ಮುಂದುವರೆಸಿಕೊಂಡು ಹೋಗಬಾರದು ಎಂದು ಹೇಳಿದ ನ್ಯಾಯಮೂರ್ತಿಗಳು, ಪ್ರಕರಣವನ್ನು ಡಿ.22ಕ್ಕೆ ಮುಂದೂಡಿದಿದ್ದಾರೆ.
ತ್ರಿಷಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಳಹಂತದ ನ್ಯಾಯಾಲಯದಲ್ಲಿ ಮನ್ಸೂರ್ ಅಲಿಖಾನ್ ಪಾಠ ಮಾಡಿಸಿಕೊಂಡಾಗಿದೆ. ಈಗ ಹೈಕೋರ್ಟ್ ನಲ್ಲೂ ಅಂಥದ್ದೇ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂದಿದೆ. ಡಿ.22ಕ್ಕೆ ನ್ಯಾಯಾಲಯವು ಈ ಪ್ರಕರಣವನ್ನು ಯಾವ ರೀತಿಯಲ್ಲಿ ನೋಡುತ್ತದೆ ಎನ್ನುವುದು ಸದ್ಯಕ್ಕಿರುವ ಕುತೂಹಲ.