ಮೈಸೂರು: ಜಿಲ್ಲೆಯ ಟಿ. ನರಸೀಪುರದ ಮೂಗೂರಿನಲ್ಲಿ ಶ್ರೀ ತ್ರಿಪುರ ಸುಂದರಿ ಅಮ್ಮನ ಜಾತ್ರೆ ವಿಜೃಂಭಣೆಯಿಂದ ನೆರವೇರಿದೆ.
ಅಪಾರ ಸಂಖ್ಯೆ ಭಕ್ತರ ಸಮ್ಮುಖದಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ ನಡೆದಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಗಮಿಸಿ ಭಕ್ತಿಯಿಂದ ರಥವನ್ನು ಎಳೆದಿದ್ದಾರೆ. ರಥಕ್ಕೆ ವಿವಿಧ ಫಲಪುಷ್ಪದಿಂದ ಅಲಂಕಾರ ಮಾಡಲಾಗಿತ್ತು. ಬರಿ ಹೂವುಗಳಿಂದ ಮಾತ್ರವಲ್ಲದೇ ಬಾಳೆ ಹಣ್ಣು, ಬಾಳೆ ಕಾಯಿಯ ಗೊನೆಯನ್ನು ರಥಕ್ಕೆ ಅಲಂಕಾರಕ್ಕಾಗಿ ಕಟ್ಟಿದ್ದರು.
Advertisement
ಭಕ್ತಿ ಭಾವದಲ್ಲಿ ಮಿಂದೆಳೆಬೇಕಿದ್ದ ಭಕ್ತರು ಬಹಳ ಆತಂಕದಲ್ಲೇ ರಥ ಎಳೆದಿದ್ದಾರೆ. ತ್ರಿಪುರ ಸುಂದರಿ ಜಾತ್ರೆಯ ರಥದ ಚಕ್ರಗಳು ಸಂಪೂರ್ಣ ಶಿಥಿಲಗೊಂಡಿದ್ದವು. ರಥದ ಚಕ್ರದಲ್ಲಿ ಬಿರುಕು ಕಾಣಿಸಿಕೊಂಡಿದ್ದರ ಬಗ್ಗೆ ತಾಲೂಕು ಹಾಗೂ ಜಿಲ್ಲಾಡಳಿತ ಗಮನಕ್ಕೆ ತಂದಿದ್ದರೂ ಚಕ್ರಗಳನ್ನ ಸರಿಪಡಿಸದೇ ಅಧಿಕಾರಿಗಳು ರಥೋತ್ಸವ ಮುಗಿಸಿದ್ದಾರೆ.
Advertisement
Advertisement
ಬಳ್ಳಾರಿಯ ಕೊಟ್ಟೂರು ಜಾತ್ರಾ ಸಂದರ್ಭದಲ್ಲಿ ರಥದ ಚಕ್ರ ಕುಸಿದಿತ್ತು. ಅದೇ ರೀತಿಯಾಗಿ ಇಲ್ಲೂ ಅವಘಡ ಸಂಭವಿಸಿಬೇಕೇ? ಯಾಕೆ ಅಧಿಕಾರಿಗಳು ಇನ್ನೂ ಈ ವಿಚಾರದ ಬಗ್ಗೆ ಎಚ್ಚೆತ್ತುಕೊಳ್ಳುವುದಿಲ್ಲ ಎಂದು ಭಕ್ತರು ಪ್ರಶ್ನಿಸಿ ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
Advertisement
ಹತ್ತಾರು ವರ್ಷಗಳಿಂದ ರಥದ ಚಕ್ರಗಳಿಗೆ ಕಾಯಕಲ್ಪ ಸಿಕ್ಕಿಲ್ಲ. ಯಾವ ಕ್ಷಣದಲ್ಲಾದರೂ ರಥ ಉರುಳುವ ಅಪಾಯ ಇತ್ತು. ಆದರೆ ಸದ್ಯ ಯಾವುದೇ ಅನಾಹುತ ಆಗದೇ ರಥೋತ್ಸವ ಯಶಸ್ವಿಯಾಗಿ ನೆರವೇರಿದ್ದು ಭಕ್ತರಿಗೆ ಸಂತಸ ನೀಡಿದೆ.