ಅಗರ್ತಲಾ: ತ್ರಿಪುರಾದ ಮೃಗಾಲಯದಲ್ಲಿ ಸಿಂಹ ಮತ್ತು ಸಿಂಹಿಣಿಗೆ ಅಕ್ಬರ್-ಸೀತಾ ಎಂದು ನಾಮಕರಣ ಮಾಡಿದ ಅಧಿಕಾರಿಯನ್ನು ಸರ್ಕಾರ ಇದೀಗ ಅಮಾನತುಗೊಳಿಸಿದೆ.
ನಾಮಕರಣದ ವಿವಾದದ ನಡುವೆ, ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಬಿನ್ ಲಾಲ್ ಅಗರ್ವಾಲ್ ರನ್ನು ಸರ್ಕಾರ ಅಮಾನತುಗೊಳಿಸಿದೆ. ಈ ಹೆಸರುಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಲ್ಕತ್ತಾ ಹೈಕೋರ್ಟ್‌ನಲ್ಲಿ ದೂರಿನ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.
ಫೆಬ್ರವರಿ 12 ರಂದು ತ್ರಿಪುರಾದ ಸೆಪಹಿಜಾಲಾ ಝೂಲಾಜಿಕಲ್ ಪಾರ್ಕ್‌ಗೆ ಎರಡು ಸಿಂಹಗಳನ್ನು ತರಲಾಯಿತು. ಉತ್ತರ ಬಂಗಾಳದ ಸಿಲಿಗುರಿಯ ಬೆಂಗಾಲ್ ಸಫಾರಿಯಿಂದ ಪ್ರಾಣಿ ವಿನಿಮಯ ಕಾರ್ಯಕ್ರಮದಡಿಯಲ್ಲಿ ಈ ಹುಲಿಗಳನ್ನು ತರಲಾಯಿತು. ಆ ಬಳಿಕ ಈ ಎರಡೂ ಸಿಂಹಗಳನ್ನು ಒಂದೇ ಆವರಣದಲ್ಲಿ ಹಾಕಲಾಗಿದೆ ಎನ್ನುವುದರ ಜೊತೆ ಅವುಗಳ ಹೆಸರು ಭಾರೀ ಚರ್ಚೆಗೆ ಗ್ರಾಸವಾಯಿತು.
ಇತ್ತ ಹೆಸರು ಬದಲಾವಣೆಗೆ ಒತ್ತಾಯಿಸಿ ವಿಎಚ್‌ಪಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದರಿಂದ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಎರಡೂ ಪ್ರಾಣಿಗಳಿಗೆ ಆಯ್ಕೆ ಮಾಡಿರುವ ಹೆಸರುಗಳ ಬಗ್ಗೆ ನ್ಯಾಯಮೂರ್ತಿ ಭಟ್ಟಾಚಾರ್ಯ ಅಸಮ್ಮತಿ ವ್ಯಕ್ತಪಡಿಸಿ ಹೆಸರು ಬದಲಾವಣೆ ಮಾಡುವಂತೆ ಸೂಚಿಸಿದ್ದರು.
 
					 
		 
		 
		 
		 
		 
		 
		 
		 
		