– ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಗ್ರಾಮಸ್ಥರಿಗೆ ಕಾಟ
ಕೋಲ್ಕತ್ತಾ: ಲೋಕಸಭಾ ಚುನಾವಣೆಯಲ್ಲಿ ಜನ ಬಿಜೆಪಿಗೆ ಮತನೀಡಿ ಗೆಲ್ಲಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಇದೇ ಸಿಟ್ಟಿಗೆ ಪಶ್ಚಿಮ ಬಂಗಾಳದ ಪಶ್ಚಿಮ ಬದ್ರ್ವಾನ್ ಮತ್ತು ಬಿರ್ಬುಮ್ ಜಿಲ್ಲೆಗಳ ಮೂರು ಪ್ರದೇಶಗಳಲ್ಲಿ ಟಿಎಂಸಿ ಕಾರ್ಯಕರ್ತರು ಟ್ಯೂಬ್ ವೆಲ್ ಗಳು ಹಾಗೂ ನೀರಿನ ಪೈಪ್ ಲೈನ್‍ಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬದ್ರ್ವಾನ್- ದುರ್ಗಾಪುರ ಕ್ಷೇತ್ರದಲ್ಲಿ ಬಿಜೆಪಿಯ ಎಸ್.ಎಸ್ ಅಹ್ಲುವಾಲಿಯಾ ಅವರು 2,439 ಮತಗಳ ಅಂತರದಲ್ಲಿ ಟಿಎಂಸಿಯ ಮಮತಾಜ್ ಸಂಘಮಿತ ಅವರನ್ನು ಸೋಲಿಸಿದ್ದಾರೆ. ಹಾಗೆಯೇ ಬಿರ್ಬುಮ್‍ನ ರಾಮ್‍ಪುರಹಟ್ ಕ್ಷೇತ್ರದಲ್ಲಿ ಬಿಜೆಪಿಯ ದೂಧ್ ಕುಮಾರ್ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಟಿಎಂಸಿ ಕಾರ್ಯಕರ್ತರು ತಮ್ಮ ಪಕ್ಷ ಸೋಲು ಕಂಡಿರುವುದಕ್ಕೆ ಸಿಟಿಗೆದ್ದಿದ್ದಾರೆ. ಆದ್ದರಿಂದ ಈ ಕ್ಷೇತ್ರದ ಜನರು ಬಿಜೆಪಿಗೆ ಮತ ನೀಡಿದ್ದಾರೆ ಎಂದು ಟ್ಯೂಬ್ ವೆಲ್ ಗಳು ಹಾಗೂ ನೀರಿನ ಪೈಪ್ ಲೈನ್‍ಗಳನ್ನು ಒಡೆದು ತೊಂದರೆ ನೀಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
Advertisement
Advertisement
ಬಿಜೆಪಿ ಹೆಚ್ಚು ಮತಗಳಿಸಿ ಇಲ್ಲಿ ಆಡಳಿತದಲ್ಲಿರುವ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಿದೆ. ಹೀಗಾಗಿ ಈ ಕ್ಷೇತ್ರದಲ್ಲಿ 5-6 ಟ್ಯೂಬ್ ವೆಲ್ ಗಳು ಹಾಗೂ ಕುಡಿಯುವ ನೀರಿನ ಪೈಪ್‍ಲೈನ್‍ಗಳನ್ನು ಒಡೆದು ಹಾಳು ಮಾಡಿದ್ದಾರೆ. ಅಷ್ಟೇ ಅಲ್ಲದೇ ಪ್ರತಿದಿನ ನೀರು ಸರಬರಾಜು ಮಾಡುವ ಸುಮಾರು 10 ಸಾರ್ವಜನಿಕ ನಲ್ಲಿಗಳನ್ನು ಕೂಡ ಒಡೆದು ಹಾಕಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
Advertisement
Advertisement
ಈ ಸಂಬಂಧ ಗ್ರಾಮಸ್ಥರೆಲ್ಲ ಟಿಎಂಸಿ ನಾಯಕ ಪಿ. ದಾಸ್ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಆಗ ಟಿಎಂಸಿ ಕಾರ್ಯಕರ್ತರು, ಪಂಚಾಯ್ತಿ ಸದಸ್ಯರು ಹಾಗೂ ಯಾವ ಸ್ಥಳೀಯ ನಾಯಕರು ಈ ಕೃತ್ಯವೆಸಗಿಲ್ಲ. ಬಿಜೆಪಿ ಕ್ಷೇತ್ರದಲ್ಲಿ ಗೆದ್ದಿದೆ. ಆದ್ದರಿಂದ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದೆ ಎಂದು ಟಿಎಂಸಿ ನಾಯಕ ಆರೋಪವನ್ನು ತಳ್ಳಿಹಾಕಿದ್ದಾರೆ.
ಟಿಎಂಸಿ ನಾಯಕಿಯೊಬ್ಬರು ಮಾತನಾಡಿ, ಈ ಕೃತ್ಯವೆಸೆಗಿದವರು ಯಾರು ಎಂದು ತಿಳಿದಿಲ್ಲ. ಆದರೆ ಈಗ ಒಡೆದಿರುವ ಪೈಪ್‍ಲೈನ್‍ಗಳು ಹಾಗೂ ನಲ್ಲಿ, ಟ್ಯೂಬ್ ವೆಲ್ ಗಳನ್ನು ರಿಪೇರಿ ಮಾಡಿಸಿದ್ದೇವೆ ಎಂದಿದ್ದಾರೆ. ಈ ಘಟನೆ ಬಳಿಕ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವಿನ ಸಂಘರ್ಷ ಜೋರಾಗಿದೆ.