ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‍ನ (Trinamool Congress) ನಾಯಕ ಹಾಗೂ ಸಂಸದ ಜವಾಹರ್ ಸಿರ್ಕಾರ್ (Jawhar Sircar) ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಂಸದ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬಳಿಕ, ಸಿಎಂ ಮಮತಾ ಬ್ಯಾನರ್ಜಿಯವರಿಗೆ (Mamata Banerjee) ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ತೀವ್ರ ಆತಂಕ ಹೊರಹಾಕಿದ್ದಾರೆ.
Advertisement
ಕೋಲ್ಕತ್ತಾ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಬಂಗಾಳ ಸರ್ಕಾರ ನಿರ್ವಹಿಸಿದ ಕ್ರಮವನ್ನು ಅವರು ವಿರೋಧಿಸಿದ್ದಾರೆ. ಅಲ್ಲದೇ ರಾಜೀನಾಮೆ ಪತ್ರದಲ್ಲಿ ತಮ್ಮದೇ ಪಕ್ಷದೊಳಗಿನ ಭ್ರಷ್ಟರ ಮಿತಿಮೀರಿದ ವರ್ತನೆಯನ್ನು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಹಲವಾರು ತಿಂಗಳಿನಿಂದ ಬ್ಯಾನರ್ಜಿಯವರೊಂದಿಗೆ ಖಾಸಗಿಯಾಗಿ ಮಾತನಾಡಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಸರ್ಕಾರ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದು ಹಾಗೂ ಸಮಸ್ಯೆ ಬಗೆಹರಿಸುವಲ್ಲಿ ಪಕ್ಷ ವಿಫಲವಾಗಿದೆ. ರಾಜ್ಯ ಸರ್ಕಾರ ಹಾಗೂ ಕೆಲವು ನಾಯಕರ ಭ್ರಷ್ಟಾಚಾರದಿಂದ ನಾನು ಹೆಚ್ಚು ಭ್ರಮನಿರಸನಗೊಂಡಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.
Advertisement
Advertisement
ಭ್ರಷ್ಟ ಅಧಿಕಾರಿಗಳು ಹಾಗೂ ವೈದ್ಯರು ಪ್ರಧಾನ ಮತ್ತು ಉನ್ನತ ಹುದ್ದೆಗಳನ್ನು ಪಡೆಯುವಂತಹ ಕೆಲವು ವಿಷಯಗಳನ್ನು ನನಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಟ್ರೇನಿ ವೈದ್ಯೆಯ ಕ್ರೂರ ಅತ್ಯಾಚಾರ ಮತ್ತು ಹತ್ಯೆಯಿಂದ ಜನರ ನಂಬಿಕೆಯನ್ನು ಸರ್ಕಾರ ಕಳೆದುಕೊಂಡಿದೆ. ಸರ್ಕಾರದ ವಿರುದ್ಧ ಅಂತಹ ಆತಂಕ ಮತ್ತು ಸಂಪೂರ್ಣ ಅವಿಶ್ವಾಸವನ್ನು ನಾನು ಈ ಹಿಂದೆ ನೋಡಿಲ್ಲ ಎಂದು ಹೇಳಿಕೊಂಡಿದ್ದಾರೆ.
ಭೀಕರ ಘಟನೆಯಿಂದ ನಾನು ಒಂದು ತಿಂಗಳ ಕಾಲ ಬಳಲಿದ್ದೇನೆ. ಧರಣಿ ನಿರತ ಕಿರಿಯ ವೈದ್ಯರೊಂದಿಗೆ ಸಿಎಂ ನೇರ ಮಧ್ಯಸ್ಥಿಕೆಯನ್ನು ಆಶಿಸಿದ್ದೆ. ಆದರೆ ಅದು ನಡೆಯಲಿಲ್ಲ. ಸರ್ಕಾರವು ಈಗ ತೆಗೆದುಕೊಳ್ಳುತ್ತಿರುವ ಯಾವುದೇ ದಂಡನಾತ್ಮಕ ಕ್ರಮಗಳು ತುಂಬಾ ಕಡಿಮೆ ಮತ್ತು ತಡವಾಗಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಮೂರು ವರ್ಷಗಳ ಕಾಲ ಸಂಸತ್ತಿನಲ್ಲಿ ಬಂಗಾಳದ ಸಮಸ್ಯೆಗಳನ್ನು ಪ್ರಸ್ತಾಪಿಸಲು ನೀವು ನನಗೆ ನೀಡಿದ ಅವಕಾಶಕ್ಕಾಗಿ ನಾನು ಮತ್ತೊಮ್ಮೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಆದರೆ ನಾನು ಸಂಸದನಾಗಿ ಮುಂದುವರಿಯಲು ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.