ಬೆಂಗಳೂರು: ಯುವ ಸಮುದಾಯವನ್ನು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಾಕಾರಗಳತ್ತ ಸಳೆಯುವ ಅರ್ಥ(ಎಲಿಮೆಂಟ್ಸ್ ಆಫ್ ಆರ್ಟ್ ಆಂಡ್ ಹೆರಿಟೇಜ್ ಅಕಾಡೆಮಿ) ಕಾಲೇಜಿನಿಂದ ನಗರದಲ್ಲಿ ಶನಿವಾರ `ತ್ರಿಕಂ-2018 ನಾಟ್ಯೋತ್ಸವ ನಡೆಸಲು ತಯಾರಾಗಿದೆ.
ಖ್ಯಾತ ನೃತ್ಯ ಕಲಾವಿದೆ, ನೃತ್ಯ ಸಂಯೋಜಕಿ, ನಟಿ ಮತ್ತು ಮಾಡೆಲ್ ಆಗಿರುವ ರೂಪಾ ರವೀಂದ್ರನ್ ಸಾರಥ್ಯದಲ್ಲಿ ‘ತ್ರಿಕಂ-2018’ ನಾಟ್ಯೋತ್ಸವ ನಡೆಯಲಿದೆ. ಭರತನಾಟ್ಯವನ್ನು ಶಾಸ್ತ್ರೀಯವಾಗಿ ಅಭ್ಯಸಿಸಿರುವ ರೂಪಾ, ಕಥಕ್ ಮತ್ತು ಕೊರಿಯೋಗ್ರಫಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಭಾರತೀಯ ಶಾಸ್ತ್ರೀಯ ನೃತ್ಯ ಪ್ರಾಕಾರಗಳನ್ನು ಯುವ ಸಮುದಾಯಕ್ಕೆ ಪರಿಚಯಿಸುಲು ಮತ್ತು ಯುವ ಪೀಳಿಗೆಯನ್ನು ಸೆಳೆಯುವ ಉದ್ದೇಶದಿಂದ ಈ ನಾಟ್ಯೋತ್ಸವವನ್ನು ಆಯೋಜಿಸಲಾಗಿದೆ.
ಈ ನಾಟ್ಯೋತ್ಸವದಲ್ಲಿ ರೂಪಾ ರವೀಂದ್ರನ್ ಅವರೇ ರೂಪಿಸಿ, ನಟಿಸಿರುವ ‘ನೃತ್ಯಂ ಶಿವಂ’ ಎಂಬ ಡ್ಯಾನ್ಸ್ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ. ಈ ಡಾಕ್ಯೂಮೆಂಟರಿಯಲ್ಲಿ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಯುವ ಸಮುದಾಯಕ್ಕೆ ಪರಿಚಯಸಲಿದೆ. ನೃತ್ಯಂ ಶಿವಂ ಶಾಸ್ತ್ರೀಯ ಕಥಕ್ ಡ್ಯಾನ್ಸ್ ಮೂಲಕ ನೃತ್ಯ ಪರಂಪರೆ ಮತ್ತು ಗುರುಪರಂಪರೆಯನ್ನು ಹೇಳಲಿದೆ. ಈ ಸಾಕ್ಷ್ಯ ಚಿತ್ರ ಗುರು ಪಂಡಿತ ರಾಜೇಂದ್ರ ಗಂಗನಿ ಅವರ ಸ್ಫೂರ್ತಿದಾಯಕ ಮಾತುಗಳನ್ನು ಒಳಗೊಂಡಿದೆ.
ನಾಟ್ಯೋತ್ಸವದ ಸ್ಥಳ: `ತ್ರಿಕಂ-2018′ ನಾಟ್ಯೋತ್ಸವ ಇದೇ ಶನಿವಾರ ಬೆಂಗಳೂರಿನ ನಂದಿದುರ್ಗ ರಸ್ತೆಯಲ್ಲಿರುವ ಶ್ರೀ ಶಾರದಾ ಮಠದ ಸಭಾಂಗಣ(44/2)ದಲ್ಲಿ ನಡೆಯಲಿದೆ. ಸಂಜೆ 5.30ಕ್ಕೆ ಈ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಈ ಸಮಾರಂಭದಲ್ಲಿ ಶ್ರೀ ಶಾರದಾ ಮಠದ ಮಾತೆ, ಕಲಾಶ್ರೀ ಗುರು ಡಾ ಸುಪರ್ಣ ವೆಂಕಟೇಶ್ ಮೊದಲಾದವರು ಉಪಸ್ಥತರಿರಲಿದ್ದಾರೆ.
ರೂಪಾ ಅವರು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಮೂಕನಾಯಕ’ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಕಲೆಯ ಆಸಕ್ತಿಯಿಂದಲೇ 13 ದೇಶಗಳನ್ನು ಸುತ್ತಿ ಅಧ್ಯಯನ ನಡೆಸಿದ್ದಾರೆ. ಕೆಎಸ್ ಡಿಎಲ್, ಮೈಸೂರು ಸೋಪ್ ಮತ್ತು ಖಾದಿ ಗ್ರಾಮೋದ್ಯೋಗದ ಬ್ರ್ಯಾಂಡ್ ಅಂಬಾಸಡರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಷ್ಟಲ್ಲದೇ ಎನ್‍ಜಿಓ, ಕಾರ್ಪೋರೇಟ್ ಸಿನಿಮಾ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ರೂಪಾ ರವೀಂದ್ರನ್ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.